alex Certify ಸೈನ್ಸ್ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಇನ್ಮುಂದೆ ಪಿಯು ಪಿಸಿಎಂಬಿ ಕನ್ನಡ ಮಾಧ್ಯಮದ ಪುಸ್ತಕ ಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈನ್ಸ್ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಇನ್ಮುಂದೆ ಪಿಯು ಪಿಸಿಎಂಬಿ ಕನ್ನಡ ಮಾಧ್ಯಮದ ಪುಸ್ತಕ ಲಭ್ಯ

ಬೆಂಗಳೂರು: ನಮ್ಮ ಪದವಿ ಪೂರ್ವ ಶಿಕ್ಷಣದ ವಿಜ್ಞಾನ ವಿಭಾಗದಲ್ಲಿ ಸಿಬಿಎಸ್‍ಇ ಪಠ್ಯಕ್ರಮದ ಪಿಸಿಎಂಬಿ ಪುಸ್ತಕಗಳು ಇಂಗ್ಲಿಷ್‍ನಲ್ಲಿದ್ದುದರಿಂದ ಕನ್ನಡ ಮಾಧ್ಯಮದಲ್ಲಿ ಅಭ್ಯಸಿಸುವ ವಿದ್ಯಾರ್ಥಿಗಳಿಗಾಗುವ ತೊಂದರೆ ನೀಗಿಸಲು ಅನುಕೂಲವಾಗುವಂತೆ ಎನ್.ಇ.ಎಸ್.ಆರ್.ಟಿ.ಸಿ. ಪುಸ್ತಕಗಳನ್ನು ಇದೇ ಮೊದಲಬಾರಿ ಕನ್ನಡಕ್ಕೆ ಭಾಷಾಂತರಿಸಲಾಗಿದೆ ಎಂದು  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ತಿಳಿಸಿದ್ದಾರೆ.

ಗುರುವಾರ ಪಿಯು ಇಲಾಖೆಯ ಸಭಾಂಗಣದಲ್ಲಿ ಪಿಯುಸಿಯ ಎನ್‍ಇಎಸ್‍ಆರ್‍ಟಿಸಿಯ  ಬಹು ನಿರೀಕ್ಷಿತ ದ್ವಿತೀಯ ಪಿಯುಸಿ ತರಗತಿಯ ಪಿಸಿಎಂಬಿ ಪಠ್ಯಗಳ ಕನ್ನಡ ಅವತರಣಿಕೆಗಳನ್ನು ನಾಡಿನ ಪಿಯು ವಿಜ್ಞಾನ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಅರ್ಪಿಸಿ ಮಾತನಾಡಿದರು.

 

ಕನ್ನಡ ಮಾಧ್ಯಮದಲ್ಲಿ ಹತ್ತನೇ ತರಗತಿ ಉತ್ತೀರ್ಣರಾಗಿ ಪಿಯುಸಿಯಲ್ಲಿ ವಿಜ್ಞಾನ ಸಂಯೋಜನೆಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕನ್ನಡ ಅವತರಣಿಕೆಗಳನ್ನು ಇಂದು ಬಿಡುಗಡೆ ಮಾಡಲಾಗಿದ್ದು, ಇಲಾಖೆಯಲ್ಲಿ ಇದೊಂದು ಅತ್ಯಂತ ಪ್ರಮುಖ ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದಾರೆ.

ಕಲಾ ವಿಭಾಗದ ಅಭ್ಯರ್ಥಿಗಳು ಮಾತ್ರವೇ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯುತ್ತಿದ್ದರು. ಆದರೆ ಪಿಸಿಎಂಬಿ ಸಂಯೋಜನೆಯ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದ ಪುಸ್ತಕಗಳು ಇಲ್ಲವಾದ್ದರಿಂದ ಅವರು ಇಷ್ಟವಿಲ್ಲದಿದ್ದರೂ ಇಂಗ್ಲಿಷ್‍ನಲ್ಲೇ ಬರೆಯಬೇಕಿತ್ತು. ಈಗ ಪುಸ್ತಕಗಳು ಕನ್ನಡ ಮಾಧ್ಯಮದಲ್ಲಿ ದೊರೆಯುವ ಅವಕಾಶವಾಗಿರುವುದರಿಂದ ಪಿಸಿಎಂಬಿ ವಿದ್ಯಾರ್ಥಿಗಳೂ ಇನ್ನು ಮುಂದೆ ಕನ್ನಡದಲ್ಲಿ ಬರೆಯಬಹುದಾಗಿದೆ. ಉಪನ್ಯಾಸಕರೂ ಸಹ ಕನ್ನಡದಲ್ಲಿ ಬೋಧಿಸಲು ಸಹಾಯಕವಾಗಿದೆ ಎಂದು ಹೇಳಿದ್ದಾರೆ.

ಇದು ಸ್ಪರ್ಧಾತ್ಮಕ ಜಗತ್ತು. ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ದೇಶದ ಎಲ್ಲ ಭಾಗದ ಮಕ್ಕಳೊಂದಿಗೆ ನಮ್ಮ ಮಕ್ಕಳೂ ಸ್ಪರ್ಧಿಸಬೇಕಾಗಿದೆ. ನಮ್ಮ ಸಿಇಟಿ ಅಷ್ಟೇ ಅಲ್ಲ, ಜೆಇಇ, ನೀಟ್ ನಂತಹ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸ್ಪರ್ಧಿಸಲು ಅನುವಾಗುವಂತೆ 2013-14ರಿಂದ ನಮ್ಮ ರಾಜ್ಯದ ಶಾಲಾ ಕಾಲೇಜುಗಳಲ್ಲಿ ಪ್ರಚಲಿತದಲ್ಲಿದ್ದ ಪಠ್ಯಕ್ರಮಗಳನ್ನು ಕೇಂದ್ರೀಯ ಶಾಲಾ ಕಾಲೇಜುಗಳಲ್ಲಿ ಪ್ರಚಲಿತವಿರುವ ಪಠ್ಯಕ್ರಮಕ್ಕೆ ಬದಲಿಸಲಾಗಿದೆ. ನಮ್ಮ ರಾಜ್ಯದ ಬುದ್ಧಿವಂತ ಮಕ್ಕಳು ಯಾವುದೇ ರಾಜ್ಯದ ವಿದ್ಯಾರ್ಥಿಗಳೊಂದಿಗೆ ಸಮಬಲರಾಗಿ ಸ್ಪರ್ಧಿಸುವ ಉತ್ತಮ ಅವಕಾಶ ಈಗಿರುವುದರಿಂದ ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಪಿಸಿಎಂಬಿ ಸಂಯೋಜನೆಯಲ್ಲಿ ಸಿಬಿಎಸ್‍ಇ ಪಠ್ಯಕ್ರಮ ಅಳವಡಿಸಿಕೊಂಡಿದ್ದು, ಎನ್‍ಸಿಇಆರ್‍ಟಿ ಪಠ್ಯಪುಸ್ತಕಗಳನ್ನು ನಮ್ಮ ಮಕ್ಕಳು ಓದಬೇಕಾಗಿತ್ತು ಎಂದು ಹೇಳಿದ್ದಾರೆ.

ಸಿಬಿಎಸ್‍ಇ ಪಠ್ಯ ಅಳವಡಿಸಿಕೊಂಡಿದ್ದರಿಂದ ಇಂಗ್ಲಿಷ್‍ನಲ್ಲೇ ಪುಸ್ತಕಗಳಿದ್ದುದರಿಂದ ಕನ್ನಡ ಮಾಧ್ಯಮದಲ್ಲಿ ಎಸ್‍ಎಸ್‍ಎಲ್‍ಸಿ ಪಾಸ್ ಮಾಡಿದ ಪಿಯುಸಿ ಸೇರಿದ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಅದನ್ನು ಮನಗಂಡು ಕನ್ನಡ ಮಾಧ್ಯಮದಲ್ಲಿ ಉತ್ತೀರ್ಣರಾಗಿ ಪಿಯುಸಿಯಲ್ಲಿ ವಿಜ್ಞಾನ ಸಂಯೋಜನೆಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 2015ರಿಂದಲೇ ಕನ್ನಡ ಮಾಧ್ಯಮಕ್ಕೆ ಪಠ್ಯಪುಸ್ತಕಗಳ ಅನುವಾದ ಒಂದು ಪ್ರಯತ್ನವಾಗಿತ್ತಾದರೂ ಅದು ಕೈಗೂಡಿರಲಿಲ್ಲ ಎಂದು ಹೇಳಿದ್ದಾರೆ.

ಈ ಕಾರ್ಯವನ್ನು ಚುರುಕುಗೊಳಿಸಲು ಅನುವಾಗುವಂತೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಿಗೆ ಒಂದೊಂದರಂತೆ 4 ವಿವಿಧ ಸಮಿತಿಗಳನ್ನು ರಚಿಸಿ ಪಠ್ಯವನ್ನು ಪೂರ್ಣವಾಗಿ ಕನ್ನಡಕ್ಕೆ ಭಾಷಾಂತರಿಸಿ ಪುನರ್ ಪರಿಶೀಲಿಸಿ ಮುದ್ರಣ ಕಾರ್ಯವನ್ನು ಪೂರ್ಣಗೊಳಿಸಿದೆ. ವಿಜ್ಞಾನ ಸಂಯೋಜನೆ ಹೊಂದಿರುವ ರಾಜ್ಯದ 650 ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಗ್ರಂಥಾಲಯಗಳಿಗೆ ಒಂದು ಸೆಟ್ ಪುಸ್ತಕಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳ ಗ್ರಂಥಾಲಯಗಳಿಗೆ ಹಾಗೂ ಆಸಕ್ತರಿಗೆ ಈ ಪುಸ್ತಕಗಳನ್ನು ಸರ್ಕಾರಿ ಮುದ್ರಣಾಲಯದಲ್ಲಿ ಖರೀದಿಸಲು ವ್ಯವಸ್ಥೆ ಮಾಡಲಾಗಿದೆ. ಇದರಿಂದ ನೀಟ್‍ನಂತಹ   ಸ್ಪರ್ಧಾತ್ಮಕ ಪರೀಕ್ಷೆಗಳು ಆಂಗ್ಲ ಮಾಧ್ಯಮದೊಂದಿಗೆ ಕನ್ನಡ ಮಾಧ್ಯಮದಲ್ಲೂ ನಡೆಯುತ್ತಿರುವುದರಿಂದ   ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.

ಇಂಗ್ಲಿಷ್‍ನಲ್ಲಿ ಪಾಠ ಕೇಳಿ ಕನ್ನಡದಲ್ಲಿ ಪರೀಕ್ಷೆ ಬರೆಯುತ್ತಿದ್ದುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದುದನ್ನು ಮನಗಂಡು ಇಲಾಖೆ ಈ ಉಪಕ್ರಮಕ್ಕೆ ಮುಂದಾಗಿದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸಲು ಮತ್ತು ಕಲಿಯಲು ಇಚ್ಛಿಸುವ ಉಪನ್ಯಾಸಕರು ಮತ್ತು ಶಿಕ್ಷಕರಿಗೆ ಇದು ಹೆಚ್ಚಿನ ಪ್ರೇರೇಪಣೆ ನೀಡಲಿದೆ. ಪಿಸಿಎಂಬಿ ಸಂಯೋಜನೆಯಲ್ಲಿ ಬೋಧನೆ ಇಂಗ್ಲಿಷ್‍ನಲ್ಲೇ ಇರುತ್ತದೆ. ಪರೀಕ್ಷೆಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆಯಲು ಅವಕಾಶಗಳಿವೆ. ಇಂಗ್ಲಿಷ್‍ನಲ್ಲಿ ಪಾಠ ಕೇಳಿದ್ದ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಬರೆಯಲು ತೊಡಕಾಗುತ್ತದೆ. ಆದರೆ ಈಗ ಪುಸ್ತಕಗಳೇ ಕನ್ನಡ ಮಾಧ್ಯಮದಲ್ಲಿ ದೊರೆಯುತ್ತವಾದ್ದರಿಂದ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ನಮ್ಮ ಸರ್ಕಾರದ ಕನ್ನಡ ಕುರಿತ ಬದ್ಧತೆಯು ಪ್ರಶ್ನಾತೀತವಾಗಿದ್ದು, ಕನ್ನಡ ಉಳಿವು ಮತ್ತು ಬೆಳವಣಿಗೆಗೆ ತನ್ನದೇ  ಆದ ಕ್ರಮಗಳನ್ನು ತೆಗೆದುಕೊಳ್ಳುತ್ತಾ ಬಂದಿದೆ. ಆ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಈಗ ಪಿಯುಸಿಯಲ್ಲಿ ಎನ್‍ಸಿಇಆರ್‍ಟಿ ಪುಸ್ತಕಗಳು ಕನ್ನಡ ಮಾಧ್ಯಮದಲ್ಲಿ ದೊರೆಯುವಂತಾಗಿದೆ. ಈ ಮೂಲಕ ನಮ್ಮ ಸರ್ಕಾರದ ಕನ್ನಡಪರ ಕಾಳಜಿ ಮತ್ತೊಮ್ಮೆ ವ್ಯಕ್ತವಾಗಿರುವುದನ್ನು ನಾವು ಗಮನಿಸಬಹುದಾಗಿದೆ ಎಂದರು.  ಇದೇ ಮೊದಲಬಾರಿಗೆ ಎನ್‍ಸಿಇಆರ್‍ಟಿ ಪುಸ್ತಕಗಳು ಕನ್ನಡ ಅವತರಣಿಕೆಯಲ್ಲಿ ದೊರೆಯುವಂತಾಗಿದೆ ಎಂದು ಅವರು ಹೇಳಿದ್ದಾರೆ.

ಯಾವುದೇ ಪಠ್ಯಕ್ರಮದ ಕುರಿತಾಗಲೀ ವಿದ್ಯಾರ್ಥಿಗಳಿಗೆ ಆತಂಕವಿರುವುದು ಸಹಜವೇ ಹೌದು. ಅದರಲ್ಲೂ ಹೊಸ ಪಠ್ಯಕ್ರಮವು ಉಪನ್ಯಾಸಕರಾಗಲಿ ಇಲ್ಲವೇ ವಿದ್ಯಾರ್ಥಿಗಳಿಗಾಗಲೀ ತನ್ನದೇ ಆದ ಸವಾಲುಗಳನ್ನು ಮುಂದೊಡ್ಡುತ್ತದೆ ಎಂಬುದು ಸುಳ್ಳಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಇಂತಹ ಉಪಕ್ರಮಕ್ಕೆ ಮುಂದಾಗಿರುವುದು ವಿದ್ಯಾರ್ಥಿಗಳು, ಉಪನ್ಯಾಸಕರು ಸೇರಿದಂತೆ ಎಲ್ಲರಿಗೂ ಅನುಕೂಲವಾಗಿದೆ. ಈ ಕನ್ನಡ ಅವತರಣಿಕೆಯ ಪುಸ್ತಕಗಳನ್ನು ಪಿಯುಸಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕ ವರ್ಗ ಸದುಪಯೋಗಪಡಿಸಿಕೊಳ್ಳತ್ತದೆಂಬ ವಿಶ್ವಾಸ ನನ್ನದು. ಎಲ್ಲರೂ ಇದರ ಉಪಯೋಗ ಪಡೆಯಲಿ. ಈ ಮೂಲಕ ನಮ್ಮ ಪಿಯು ಮಂಡಳಿ ಉತ್ತಮ ಉಪಕ್ರಮಕ್ಕೆ  ಮುಂದಾಗಿದೆ. ಈ ಕೆಲಸದಲ್ಲಿ ತೊಡಗಿಸಿಕೊಂಡು ಇಲಾಖೆಯ ನಿರ್ದೇಶಕರು ಸೇರಿದಂತೆ ಅಧಿಕಾರಿಗಳು ಹಾಗೂ ನುರಿತ ಬೋಧಕರು ಪುಸ್ತಕ ಭಾಷಾಂತರವನ್ನು ಕ್ಷಿಪ್ರವಾಗಿ ಮುಗಿಸಿಕೊಟ್ಟಿದ್ದಾರೆ. ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಪದವಿ ಪೂರ್ವ ಇಲಾಖೆ ನಿರ್ದೇಶಕಿ ಎಂ. ಕನಗವಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದರು. ಪಿಯು ಇಲಾಖೆಯ   ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...