ಬೆಂಗಳೂರು: ಆಘಾತಕಾರಿ ಘಟನೆಯಲ್ಲಿ ವಿದ್ಯಾರ್ಥಿನಿ ಮೇಲೆ ಮಲತಂದೆಯೇ ನಿರಂತರ ಅತ್ಯಾಚಾರ ಎಸೆಗಿದ್ದಾನೆ. ಅಲ್ಲದೆ, ಮಾಡೆಲಿಂಗ್ ಮಾಡುವಂತೆ, ಬೆತ್ತಲೆ ಫೋಟೋ ತೆಗೆದುಕೊಳ್ಳುವಂತೆ, ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪೀಡಿಸುತ್ತಿದ್ದು, ಇದರಿಂದ ನೊಂದ 20 ವರ್ಷದ ವಿದ್ಯಾರ್ಥಿನಿ ಹುಳಿಮಾವು ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅರಕೆರೆಯ ಸಾಮ್ರಾಟ್ ಲೇಔಟ್ ನಿವಾಸಿಯಾಗಿರುವ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.
ವಿದ್ಯಾರ್ಥಿನಿಯ ತಾಯಿ ಹಲವು ವರ್ಷಗಳ ಹಿಂದೆ ಗಂಡನಿಂದ ಡೈವೋರ್ಸ್ ಪಡೆದುಕೊಂಡಿದ್ದು ನಂತರ ಆರೋಪಿ ಜೊತೆಗೆ ಮದುವೆಯಾಗಿ ವಾಸವಾಗಿದ್ದಾರೆ. ವಿದ್ಯಾರ್ಥಿನಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಓದುತ್ತಿದ್ದಾಳೆ. ಮಲತಂದೆ ಮತ್ತು ತಾಯಿಯೊಂದಿಗೆ ವಾಸವಾಗಿರುವ ವಿದ್ಯಾರ್ಥಿನಿಗೆ ತಾಯಿಯೇ ಆಹಾರದಲ್ಲಿ ನಿದ್ದೆ ಮಾತ್ರೆ ಬೆರೆಸಿ ಕೊಡುತ್ತಿದ್ದಳು. ಆಕೆ ಅರೆಪ್ರಜ್ಞಾವಸ್ಥೆಯಲ್ಲಿ ಇದ್ದ ಸಂದರ್ಭದಲ್ಲಿ ಮಲತಂದೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ.
ಕೆಲಸದ ನಿಮಿತ್ತ ಹೈದರಾಬಾದ್ ಗೆ ಕರೆದುಕೊಂಡು ಹೋಗಿದ್ದ ವೇಳೆ ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರವೆಸಗಿದ್ದು, ಬೆಳಿಗ್ಗೆ ಆಕೆಗೆ ಎಚ್ಚರವಾದಾಗ ಮೈಮೇಲೆ ಬಟ್ಟೆ ಇರಲಿಲ್ಲ. ಹೀಗೆ ನಿರಂತರವಾಗಿ ಮಲತಂದೆಯಿಂದ ಅತ್ಯಾಚಾರ ಎಸಗಿದ್ದನ್ನು ಪ್ರಶ್ನಿಸಿದ್ದಕ್ಕೆ ಮೊಬೈಲ್ ಕಸಿದುಕೊಂಡು ಕಾಲೇಜಿಗೆ ಹೋಗದಂತೆ ತಾಕೀತು ಮಾಡಿ ಬೆದರಿಕೆ ಹಾಕಲಾಗಿದೆ.
ಅಲ್ಲದೆ ಕಾಲೇಜಿಗೆ ಹೋಗದೆ ಮಾಡಲಿಂಗ್ ನಲ್ಲಿ ತೊಡಗಿಸಿಕೊಳ್ಳಬೇಕು. ಬೆತ್ತಲೆ ಚಿತ್ರಗಳನ್ನು ತೆಗೆಸಿಕೊಂಡು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಮದ್ಯ, ಮಾದಕ ವಸ್ತು ಸೇವಿಸಬೇಕೆಂದು ಮಲತಂದೆ ಒತ್ತಾಯ ಮಾಡುತ್ತಿದ್ದ. ಬಲವಂತವಾಗಿ ಮಾದಕ ದ್ರವ್ಯ ಕೊಟ್ಟು ತಾಯಿಯ ಸಹಕಾರದೊಂದಿಗೆ ಅತ್ಯಾಚಾರ ಎಸಗಿದ್ದಾನೆ ಎಂದು ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ಹೇಳಲಾಗಿದೆ.