alex Certify ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಭರ್ಜರಿ ʼಗುಡ್ ನ್ಯೂಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಭರ್ಜರಿ ʼಗುಡ್ ನ್ಯೂಸ್ʼ

ಹುಣಸೂರು: ಕಲಬುರಗಿ, ಬೆಳಗಾವಿ, ಬೆಂಗಳೂರು ಹಾಗೂ ಮೈಸೂರು ವಿಭಾಗಗಳಲ್ಲಿ ಸಾಲ ಮೇಳ ಮಾಡಿ ರೈತರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲಾಗುವುದು ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಸಹಕಾರ ಇಲಾಖೆ ಮೂಲಕ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಕಳೆದ ವರ್ಷ 13,500 ಕೋಟಿ ರೂ., ಈ ಸಾಲಿನಲ್ಲಿ 14,500 ಕೋಟಿ ರೂ. ಹಾಗೂ ಮುಂದಿನ ವರ್ಷ 20 ಸಾವಿರ ಕೋಟಿ ರೂಪಾಯಿ ಸಾಲ ನೀಡುವಂತೆ ಮುಖ್ಯಮಂತ್ರಿಗಳ ಜೊತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಹೊಸಬರನ್ನು ಗುರುತಿಸಿ ಸಾಲ  ನೀಡಬೇಕೆಂಬ ಗುರಿ ನೀಡಲಾಗಿದೆ. ಅಲ್ಲದೆ, 21 ಡಿಸಿಸಿ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕ್ಸ್ ವತಿಯಿಂದ 14500 ಕೋಟಿ ರೂಪಾಯಿ ಸಾಲ ನೀಡುವ ಗುರಿ ಹಾಕಲಾಗಿದೆ. ಈ ಬಗ್ಗೆ ಆಗಸ್ಟ್ 31 ರ ಗುರಿ ನೀಡಲಾಗಿದೆ. 5529 ಕೋಟಿ ರೂ. ಸಾಲವನ್ನು 119 ಸಕ್ಕರೆ ಕಾರ್ಖಾನೆಗಳು ಪಡೆದಿವೆ. ಆದರೆ, ವಸೂಲಾತಿ ಏನೂ ಆಗಿಲ್ಲ. ಅದೇ ರೈತರಿಗೆ ಸಾಲದ ಹಣ ಕೊಟ್ಟರೆ ಅವರಿಂದ ಶೇಕಡಾ 100ರಷ್ಟು ಹಣ ಮರುಪಾವತಿಯಾಗುತ್ತದೆ. ಹೀಗಾಗಿ ಹೈನುಗಾರಿಕೆ, ಮೀನುಗಾರಿಕೆ ಸೇರಿದಂತೆ ಇತರ ಕ್ಷೇತ್ರಗಳಿಗಾಗಿ ಸಾಲ ಕೊಟ್ಟರೆ ಸಾಲ ಮರುಪಾವತಿಯಾಗುವುದಲ್ಲದೆ ಬ್ಯಾಂಕುಗಳು ಅಭಿವೃದ್ಧಿಯಾಗಲಿದೆ ಎಂದು ಹೇಳಿದ್ದಾರೆ.

ರಾಜ್ಯದ ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರಿಗೂ ತಲಾ 3000 ರೂ. ಸಿಗಬೇಕು ಎಂಬ ನಿಟ್ಟಿನಲ್ಲಿ ನಾನೂ ಸಹ ವಿಚಾರಣೆ ನಡೆಸುತ್ತಿದ್ದೇನೆ. ಈಗಾಗಲೇ 42 ಸಾವಿರ ಆಶಾ ಕಾರ್ಯಕರ್ತೆಯರಲ್ಲಿ ಬಹುತೇಕರಿಗೆ ಪ್ರೋತ್ಸಾಹಧನ ವಿತರಣೆ ಮಾಡಲಾಗಿದೆ. ಕೆಲವೇ ಕೆಲವು ಆಶಾ ಕಾರ್ಯಕರ್ತೆಯರಿಗೆ ಲಭಿಸಿಲ್ಲ ಎಂಬ ಮಾಹಿತಿ ಕೇಳಿ ಬರುತ್ತಿದೆ. ಹೀಗಾಗಿ ಯಾರಿಗೆ ತಲುಪಿಲ್ಲವೋ ಅವರಿಗೆ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣೆಯ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳು ನನಗೆ ಕೊಟ್ಟಿದ್ದು, ಅದಕ್ಕೆ ಯಾವುದೇ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಿದ್ದೇವೆ. ಇನ್ನು ಸ್ತ್ರೀ ಶಕ್ತಿ ಗುಂಪುಗಳಂತೆ ಆಶಾ ಕಾರ್ಯಕರ್ತೆಯರಿಗೂ ಸಾಲ ಯೋಜನೆ ಸಿಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಅವರಿಗೆ ಸಹಕಾರಿ ಸಂಘದ ಮೂಲಕ ಸಾಲ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಶೀಘ್ರದಲ್ಲಿ ಈ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದ್ದಾರೆ.

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅಭಿರಾಂ ಜಿ.ಶಂಕರ್ ಅವರು ಮೈಸೂರಿನಲ್ಲಿಯೇ ಇರಬೇಕೆಂಬುದು ನನ್ನನ್ನೂ ಸೇರಿದಂತೆ ಎಲ್ಲರ ಬಯಕೆಯಾಗಿತ್ತು. ಕೋವಿಡ್ ಸೇರಿದಂತೆ ಹಲವು ಸಂಕಷ್ಟಗಳ ಪರಿಸ್ಥಿತಿಯಲ್ಲಿ ಅವರ ಸೇವೆ ಶ್ಲಾಘನೀಯ. ಜಿಲ್ಲಾಧಿಕಾರಿಯಾಗಿ ಜಿಲ್ಲೆಗೆ ಆಗಮಿಸಿರುವ ಶರತ್ ಅವರೂ ಸಹ ದಕ್ಷ ಅಧಿಕಾರಿಯಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸಿ ಜಿಲ್ಲೆಯ ಜನರಿಗೆ ಸ್ಪಂದಿಸಲಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದ್ದಾರೆ.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್ ಗೌಡ ಮಾತನಾಡಿ, ಕೊರೋನಾದಂತಹ ಸಂಕಷ್ಟಗಳ ಕಾಲದಲ್ಲಿ ಮನೆ ಮನೆಗೆ ಹೋಗಿ ಕಾರ್ಯನಿರ್ವಹಣೆ ಮಾಡಿದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಕೊಡಬೇಕೆಂಬ ಮುಖ್ಯಮಂತ್ರಿಗಳ ನಿರ್ಧಾರವನ್ನು ಅನುಷ್ಠಾನಕ್ಕೆ ತರುವಲ್ಲಿ ಸಚಿವರಾದ ಸೋಮಶೇಖರ್ ಅವರ ಕೊಡುಗೆ ಪ್ರಮುಖವಾಗಿದೆ. ಪ್ರತಿ ಹಣವೂ ಎಲ್ಲೂ ದುರುಪಯೋಗವಾಗದೆ ತಲುಪಿದೆ ಎಂದರೆ ಸಚಿವರೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಘೋಷಣೆಯಾಗಿ ನಿಗದಿತ ಸಮಯದಲ್ಲಿ ಅನುಷ್ಠಾನವಾಗಿರುವ ಕಾರ್ಯಕ್ರಮ ಎಂದರೆ ರಾಜ್ಯದಲ್ಲಿರುವ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣೆ ಯೋಜನೆಯಾಗಿದೆ ಎಂದು ತಿಳಿಸಿದ್ದಾರೆ.

ಶಾಸಕ ಮಂಜುನಾಥ್ ಮಾತನಾಡಿ, ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇದ್ದರೆ ಆ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗುತ್ತದೆ ಎಂಬುದಕ್ಕೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರೇ ಸಾಕ್ಷಿ. ಅವರು ಜನರ ದುಡ್ಡನ್ನು ಜನರಿಗೆ ಸೇರಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಶರತ್ ಸೇರಿದಂತೆ ಇತರರು ಇದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...