ರಾಜ್ಯದಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಅದರಲ್ಲೂ ಭಾನುವಾರ ರಾಜ್ಯದ ಪಾಲಿಗೆ ಕರಾಳ ದಿನವಾಗಿ ಪರಿಣಮಿಸಿದ್ದು, ಅಂದು ಒಂದೇ ದಿನ 1276 ಮಂದಿ ಸೋಂಕು ಪೀಡಿತರು ಪತ್ತೆಯಾಗಿದ್ದಾರೆ.
ಈ ಬೆಳವಣಿಗೆಯಿಂದ ಸರ್ಕಾರ ಆತಂಕಗೊಂಡಿದ್ದು ಹೀಗಾಗಿ ಕಟ್ಟುನಿಟ್ಟಾದ ನಿಯಮಾವಳಿಗಳನ್ನು ಜಾರಿಗೊಳಿಸಲು ಮುಂದಾಗಿದೆ. ಆದರೆ ಲಾಕ್ ಡೌನ್ ಕಾರಣಕ್ಕೆ ಮುಂದೂಡಿಕೆಯಾಗಿದ್ದ ಹತ್ತನೇ ತರಗತಿ ಪರೀಕ್ಷೆಗಳು ಈಗ ನಡೆಯುತ್ತಿದ್ದು, ಇದು ಪೂರ್ಣಗೊಳ್ಳುವುದನ್ನೇ ಸರ್ಕಾರ ಕಾಯುತ್ತಿದೆ ಎನ್ನಲಾಗಿದೆ.
ಜುಲೈ ನಾಲ್ಕರ ಶನಿವಾರದಂದು 10ನೇ ತರಗತಿ ಪರೀಕ್ಷೆಗಳು ಮುಗಿಯಲಿದ್ದು, ಅದರ ಮರುದಿನವೇ ಅಂದರೆ ಭಾನುವಾರ ರಾಜ್ಯದಾದ್ಯಂತ ಕರ್ಫ್ಯೂ ಜಾರಿ ಮಾಡಲಾಗುತ್ತದೆ. ಈ ಕರ್ಫ್ಯೂ ಪ್ರತಿ ಭಾನುವಾರ ಇರಲಿದೆ ಎನ್ನಲಾಗಿದೆ.
ಅಲ್ಲದೆ ಅಂತರರಾಜ್ಯ ಸಂಚಾರಕ್ಕೂ ಬ್ರೇಕ್ ಬೀಳಲಿದೆ ಎನ್ನಲಾಗಿದ್ದು, ಅಂತರ್ ಜಿಲ್ಲಾ ಸಂಚಾರವನ್ನು ನಿಷೇಧಿಸುವ ಕುರಿತು ಚಿಂತನೆ ನಡೆದಿದೆ. ಇಷ್ಟೆಲ್ಲಾ ಕ್ರಮಗಳನ್ನು ಕೈಗೊಂಡರೂ ಒಂದೊಮ್ಮೆ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗತೊಡಗಿದರೆ ಸಂಪೂರ್ಣ ಲಾಕ್ಡೌನ್ ಜಾರಿಯಾಗುವ ಸಾಧ್ಯತೆಯೂ ಇಲ್ಲದಿಲ್ಲ.