ಕೊರೊನಾ ಲಾಕ್ಡೌನ್ ಕಾರಣಕ್ಕೆ ಮುಂದೂಡಿಕೆಯಾಗಿದ್ದ 10ನೇ ತರಗತಿ ಪರೀಕ್ಷೆಗಳು ನಾಳೆಯಿಂದ ಆರಂಭವಾಗಲಿದೆ. ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ನಡೆದಿದ್ದು, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪರೀಕ್ಷಾ ಕೇಂದ್ರಗಳ ಕೊಠಡಿಗಳನ್ನು ಈಗಾಗಲೇ ಕಂಪ್ಲೀಟ್ ಸ್ಯಾನಿಟೈಸ್ ಮಾಡಲಾಗಿದ್ದು, ಜೊತೆಗೆ ಮಾಸ್ಕ್ ಧರಿಸದೆ ಬರುವ ವಿದ್ಯಾರ್ಥಿಗಳಿಗೆ ನೀಡಲೆಂದು ಮಾಸ್ಕ್ ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಜೊತೆಗೆ ಸುರಕ್ಷತೆಗಾಗಿ ವಿದ್ಯಾರ್ಥಿಗಳೂ ಸಹ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಬಹುಕಾಲದ ನಂತರ ಸ್ನೇಹಿತರು ಸಿಕ್ಕರೆಂಬ ಕಾರಣಕ್ಕೆ ವಿದ್ಯಾರ್ಥಿಗಳು ಅವರ ಕೈ ಕುಲುಕುವುದಾಗಲಿ ಅಥವಾ ಸನಿಹಕ್ಕೆ ಹೋಗುವುದಾಗಲಿ ಮಾಡಬಾರದು. ಅಂತರ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದ್ದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
ಪರೀಕ್ಷಾ ಕೇಂದ್ರ ಪ್ರವೇಶಿಸುವ ಎಲ್ಲ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕಾಗಿರುವ ಕಾರಣ ಒಂದೂವರೆ ಗಂಟೆ ಮುಂಚಿತವಾಗಿ ವಿದ್ಯಾರ್ಥಿಗಳು ಹಾಜರಿರಬೇಕಿದೆ. ಅಲ್ಲದೆ ಅನಗತ್ಯವಾಗಿ ಬಾಗಿಲು, ಕಿಟಕಿ ಸೇರಿದಂತೆ ಯಾವುದೇ ವಸ್ತುಗಳನ್ನು ಮುಟ್ಟದಂತೆ ಸೂಚಿಸಲಾಗಿದೆ.
ಒಂದೊಮ್ಮೆ ವಿದ್ಯಾರ್ಥಿಗಳಿಗೆ ಅನಾರೋಗ್ಯದ ಲಕ್ಷಣ ಕಂಡುಬಂದರೆ ಕೂಡಲೇ ಪರೀಕ್ಷಾ ಮೇಲ್ವಿಚಾರಕರಿಗೆ ತಿಳಿಸಬೇಕಾಗಿದ್ದು, ಅಲ್ಲದೇ ವಿದ್ಯಾರ್ಥಿಗಳು ಪ್ರತ್ಯೇಕ ಬ್ಯಾಗ್ ನಲ್ಲಿ ನೀರಿನ ಬಾಟಲಿ ಹಾಗೂ ಆಹಾರದ ಡಬ್ಬಿ ತರುವುದು ಒಳಿತು.