ಕೊರೊನಾ ಲಾಕ್ಡೌನ್ ಕಾರಣಕ್ಕೆ ಮುಂದೂಡಿಕೆಯಾಗಿದ್ದ 10ನೇ ತರಗತಿ ಪರೀಕ್ಷೆಗಳನ್ನು ಜೂನ್ 25ರಿಂದ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಸಕಲ ತಯಾರಿ ನಡೆಸಿದ್ದು, ಇದರ ಮಧ್ಯೆ ಸುರಕ್ಷತಾ ಕ್ರಮ ಅನುಸರಿಸುವ ಕುರಿತಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೂಚಿಸಿದೆ.
ಪರೀಕ್ಷಾ ಕೊಠಡಿ ಪ್ರವೇಶಿಸುವ ಮುನ್ನ ಪ್ರತಿ ವಿದ್ಯಾರ್ಥಿಯ ಆರೋಗ್ಯ ತಪಾಸಣೆ ನಡೆಸಬೇಕಾಗಿರುವ ಕಾರಣ ಒಂದೂವರೆ ಗಂಟೆ ಮುಂಚಿತವಾಗಿ ಬರಲು ತಿಳಿಸಲಾಗಿದ್ದು, ಅಲ್ಲದೆ ಇದಕ್ಕೂ ಮುನ್ನ ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸರ್ ನಿಂದ ಕೈಗಳನ್ನು ಸ್ವಚ್ಛ ಮಾಡಿಕೊಂಡು ಬರುವುದು ಕಡ್ಡಾಯವಾಗಿದೆ.
ವಿದ್ಯಾರ್ಥಿಗಳು ಬಹುದಿನದ ಬಳಿಕ ತಮ್ಮ ಸ್ನೇಹಿತರು ಸಿಕ್ಕರೆಂಬ ಕಾರಣಕ್ಕೆ ಕೈಕುಲುಕಲು ಮುಂದಾಗಬಾರದು ಎಂದು ತಿಳಿಸಲಾಗಿದ್ದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ ಕಂಡಕಂಡಲ್ಲಿ ಉಗುಳದಂತೆ ತಿಳಿಸಲಾಗಿದೆ.
ಕೆಮ್ಮುವಾಗ ಅಥವಾ ಸೀನುವಾಗ ಮೂಗು – ಬಾಯಿಗೆ ಕರವಸ್ತ್ರ ಅಥವಾ ಕೈಯನ್ನು ಅಡ್ಡವಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಲಾಗಿದ್ದು, ಬಾಗಿಲು, ಕಿಟಕಿ ಸೇರಿದಂತೆ ಯಾವುದೇ ವಸ್ತುಗಳನ್ನು ಅನಗತ್ಯವಾಗಿ ಮುಟ್ಟಬೇಡಿ ಎಂದು ಹೇಳಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ಅನಾರೋಗ್ಯದ ಲಕ್ಷಣವಿದ್ದಲ್ಲಿ ಪರೀಕ್ಷಾ ಮೇಲ್ವಿಚಾರಕರಿಗೆ ತಿಳಿಸಬೇಕಿದೆ.