ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿದ್ದು, ಆದರೆ ಸುರಕ್ಷತಾ ಕ್ರಮ ಕೈಗೊಂಡು ಮುಂದೂಡಿಕೆಯಾಗಿರುವ ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರ್ಕಾರಗಳಿಗೆ ಅನುಮತಿ ನೀಡಿದೆ.
ಹೀಗಾಗಿ ಕರ್ನಾಟಕವೂ ಸೇರಿದಂತೆ ಕೆಲ ರಾಜ್ಯಗಳು 10ನೇ ತರಗತಿ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಪಡಿಸಿದ್ದವು. ಆದರೆ ಕೊರೊನಾ ಸೋಂಕು ದಿನೇದಿನೇ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು, ತೆಲಂಗಾಣ ಮತ್ತು ಪುದುಚೇರಿಗಳಲ್ಲಿ ಹತ್ತನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ.
ಆದರೆ ಕರ್ನಾಟಕ ಸರ್ಕಾರ ಜೂನ್ 25ರಿಂದ 10ನೇ ತರಗತಿ ಪರೀಕ್ಷೆಗಳನ್ನು ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಇದನ್ನು ಇತ್ಯಾರ್ಥಪಡಿಸಿರುವ ಹೈಕೋರ್ಟ್ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡಿತ್ತು.
ಇದೀಗ ಬೆಳಗಾವಿಯ ರಾಜಶ್ರೀ ನಾಗರಾಜ್ ಎಂಬವರು 10ನೇ ತರಗತಿ ಪರೀಕ್ಷೆಗಳನ್ನು ನಡೆಸದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದಾರೆ. ಪರೀಕ್ಷೆಗಳನ್ನು ನಡೆಸುವಾಗ ಎಷ್ಟೇ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೂ ಸೋಂಕು ಹರಡುವ ಅಪಾಯವಿರುವ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದುಪಡಿಸಲು ಸರ್ಕಾರಕ್ಕೆ ನಿರ್ದೇಶಿಸಲು ಅವರು ಕೋರಿದ್ದಾರೆ.