ಕೊರೊನಾದಿಂದಾಗಿ ಮುಂದೂಡಿಕೆಯಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜೂನ್ 25 ರಿಂದ ನಡೆಯಲಿದೆ. ಈ ಪರೀಕ್ಷೆ ಹಿನ್ನೆಲೆ ಸಾಕಷ್ಟು ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡಿರುವ ಶಿಕ್ಷಣ ಇಲಾಖೆ, ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಸಂಬಂಧ ನಿನ್ನೆ ವಿಕಾಸಸೌಧದಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಎಸ್‌ಪಿ, ಜಿಲ್ಲಾ ಮತ್ತು ತಾಲೂಕು ಖಜಾನೆ ಅಧಿಕಾರಿಗಳು, ಡಿಡಿಪಿಐ, ಬಿಇಒರೊಂದಿಗೆ ವಿಡಿಯೋ ಕಾನ್ಫೆರೆನ್ಸ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಅವರು, ತಂತಮ್ಮ ಜಿಲ್ಲೆಯ ಕೊರೋನಾ ವಾರಿಯರ್ಸ್‌ಗಳ ನೇತೃತ್ವ ವಹಿಸಿ ಕೊರೋನಾ ಎದುರಿಸಿದಂತೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಸಮರ್ಪಕವಾಗಿ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಕೈಗೊಳ್ಳುವಲ್ಲಿ ತಮ್ಮೆಲ್ಲರ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದು ಹೇಳಿದ್ದಾರೆ.
ಈ ಬಾರಿಯ ಪರೀಕ್ಷೆ ಉಚ್ಛ ನ್ಯಾಯಾಲಯದ ಸ್ಪಷ್ಟ ಆದೇಶದಂತೆ ಶಿಕ್ಷಣ, ಆರೋಗ್ಯ, ಗೃಹ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳ ಸಮನ್ವಯದಲ್ಲಿ ನಡೆಯುತ್ತಿರುವುದರಿಂದ ಯಾವುದೇ ಒಬ್ಬ ವಿದ್ಯಾರ್ಥಿಯೂ ಯಾವುದೇ ಕಾರಣದಿಂದಲೂ ಪರೀಕ್ಷೆಯಿಂದ ವಂಚಿತವಾಗದಂತೆ ಹಾಗೂ ಪ್ರತಿ ವಿದ್ಯಾರ್ಥಿಯೂ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆಯುವಂತೆ ಮಾಡುವಲ್ಲಿ ಜಿಲ್ಲಾಡಳಿತದ ಹೊಣೆಗಾರಿಕೆ ಈ ಬಾರಿ ಎಂದಿಗಿಂತ ಹೆಚ್ಚಾಗಿದ್ದು, ಅದಕ್ಕಾಗಿ ಸಮರೋಪಾದಿಯಲ್ಲಿ ಈಗಿನಿಂದಲೇ ಎಲ್ಲ ಪರೀಕ್ಷಾ ಪೂರ್ವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಇದೇ ವೇಳೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು, ಪರೀಕ್ಷೆ ವಿರೋಧಿಗಳು, ವದಂತಿಕೋರರಂತಹ ವ್ಯಕ್ತಿಗಳು ಪರೀಕ್ಷೆ ಕುರಿತಂತೆ ಮಕ್ಕಳಲ್ಲಿ ಗೊಂದಲ ಮೂಡಿಸುವ ಸಾಧ್ಯತೆಗಳಿರುವುದರಿಂದ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಈ ಮೊದಲೇ ಅಂತಹ ವ್ಯಕ್ತಿಗಳನ್ನು ಗಮನಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಹಾಗೂ ಪರೀಕ್ಷಾ ಕೇಂದ್ರದ ಬಳಿ ಅವರು ಸುಳಿದಾಡಿ, ಚೆನ್ನಾಗಿ ಓದಿ ಪರೀಕ್ಷೆಗೆ ಸಜ್ಜಾಗಿ ಬಂದ ಪರೀಕ್ಷಾರ್ಥಿಗಳಲ್ಲಿ ಆತ್ಮವಿಶ್ವಾಸ ಕದಡುವಂತಹ ಸಾಧ್ಯತೆಗಳಿರುವ ಕಾರಣ ಪರೀಕ್ಷಾ ಕೇಂದ್ರ ಮತ್ತು ಉತ್ತರ ಪತ್ರಿಕೆಗಳ ಸಂಗ್ರಹಣಾ ಕೇಂದ್ರಗಳನ್ನು ಚುನಾವಣಾ ಸ್ಟ್ರಾಂಗ್ ರೂಮ್‌ಗಳಿಗೆ ಕೈಗೊಳ್ಳುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕೆಂದು ಹೇಳಿದ್ದಾರೆ.