ಕೊರೊನಾ ಲಾಕ್ ಡೌನ್ ಕಾರಣಕ್ಕೆ ಮುಂದೂಡಿಕೆಯಾಗಿದ್ದ 10ನೇ ತರಗತಿ ಪರೀಕ್ಷೆಗಳು, ಭಾರಿ ಸುರಕ್ಷತಾ ಕ್ರಮಗಳೊಂದಿಗೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಜುಲೈ 13ರಿಂದ ಆರಂಭವಾಗಲಿದ್ದು, ಇದಕ್ಕೂ ಕೂಡ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ.
55 ವರ್ಷ ಮೇಲ್ಪಟ್ಟ ಶಿಕ್ಷಕರು ಹಾಗೂ ತೀವ್ರತರ ಕಾಯಿಲೆಯಿಂದ ಬಳಲುತ್ತಿರುವ ಶಿಕ್ಷಕರಿಗೆ ಮೌಲ್ಯಮಾಪನ ಕಾರ್ಯದಿಂದ ವಿನಾಯಿತಿ ನೀಡಲು ಸೂಚಿಸಲಾಗಿದ್ದು, ಮೌಲ್ಯಮಾಪನ ನಡೆಯುವ ಕೇಂದ್ರವನ್ನು ಮೂರು ದಿನ ಮೊದಲು ಸಂಪೂರ್ಣವಾಗಿ ಸೋಂಕು ನಿವಾರಕ ಸಿಂಪರಣೆ ಮಾಡುವ ಮೂಲಕ ಸ್ಯಾನಿಟೈಸ್ ಮಾಡಲು ತಿಳಿಸಲಾಗಿದೆ.
ಶಿಕ್ಷಕರನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಿದ ಬಳಿಕವೇ ಮೌಲ್ಯಮಾಪನ ಕೊಠಡಿಗೆ ಕಳುಹಿಸಬೇಕೆಂದು ತಿಳಿಸಲಾಗಿದ್ದು, ಒಂದೊಮ್ಮೆ ತಾಪಮಾನ ಹೆಚ್ಚು ಕಂಡುಬಂದಲ್ಲಿ ಕೂಡಲೇ ಮುಖ್ಯ ಮೌಲ್ಯಮಾಪಕರ ಗಮನಕ್ಕೆ ತರಲು ಸೂಚಿಸಲಾಗಿದೆ. ಶಿಕ್ಷಕರು ಕೊಠಡಿಗೆ ತೆರಳುವಾಗ ತಮ್ಮದೇ ಆದ ಕುಡಿಯುವ ನೀರಿನ ಬಾಟಲ್, ಮಾಸ್ಕ್, ಸ್ಯಾನಿಟೈಸರ್ ಹಾಗೂ ಆಹಾರದ ಡಬ್ಬಿಯನ್ನು ತರಲು ತಿಳಿಸಲಾಗಿದೆ.
ಅಲ್ಲದೆ ಮೌಲ್ಯಮಾಪನ ಕೇಂದ್ರದಲ್ಲೂ ಸೋಪು, ಹ್ಯಾಂಡ್ ವಾಶ್ ಇಡಬೇಕು ಎಂದು ಸೂಚನೆ ನೀಡಲಾಗಿದ್ದು, ಮೌಲ್ಯಮಾಪನ ಕಾರ್ಯಕ್ಕೆ ಬರುವ ಶಿಕ್ಷಕರು ಪ್ರಯಾಣಿಸುವ ಬಸ್ಸುಗಳಲ್ಲಿ ಸ್ಯಾನಿಟೈಸ್ ಮಾಡಲು ಹಾಗೂ ಪ್ರಯಾಣದ ವೇಳೆ ದೈಹಿಕ ಅಂತರವನ್ನು ಕಾಪಾಡಿಕೊಳ್ಳಲು ತಿಳಿಸಲಾಗಿದೆ.