ಉಪ ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಸಚಿವ ಬಿ. ಶ್ರೀರಾಮುಲು ಅವರಿಗೆ ಸಚಿವ ಸಂಪುಟ ಪುನಾರಚನೆ ವಿಚಾರ ಶಾಕ್ ನೀಡಿದೆ ಎನ್ನಲಾಗಿದೆ.
ಶ್ರೀರಾಮುಲು ಬಳಿಯಿದ್ದ ಆರೋಗ್ಯ ಖಾತೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಕೆ. ಸುಧಾಕರ್ ಅವರಿಗೆ ನೀಡಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಆರೋಗ್ಯ ಮತ್ತು ವೈದ್ಯ ಶಿಕ್ಷಣ ಇಲಾಖೆಗೆ ಒಬ್ಬರೇ ಸಚಿವರು ಇರುವಂತೆ ನೋಡಿಕೊಳ್ಳಲಾಗುತ್ತದೆ. ಈ ಕಾರಣಕ್ಕೆ ಆರೋಗ್ಯ ಇಲಾಖೆ ಜವಾಬ್ದಾರಿಯನ್ನು ಸುಧಾಕರ್ ಅವರಿಗೆ ವಹಿಸಲಾಗುತ್ತದೆ.
ಶ್ರೀರಾಮುಲು ಅವರಿಗೆ ಸಮಾಜಕಲ್ಯಾಣ ಇಲಾಖೆ ಜವಾಬ್ದಾರಿ ವಹಿಸಲಾಗುವುದು. ಈಗಾಗಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹೊಂದಿರುವ ಶ್ರೀರಾಮುಲು ಅವರಿಗೆ ಡಿಸಿಎಂ ಗೊಂವಿಂದ ಕಾರಜೋಳ ಅವರ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ ನೀಡಲಾಗುವುದು ಎಂದು ಹೇಳಲಾಗಿದೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನಡುವೆ ಸಮನ್ವಯ ಇಲ್ಲದೆ ಸಮಸ್ಯೆ ಎದುರಾಗಿದೆ. ಅಧಿಕಾರಿಗಳು ಇಬ್ಬರು ಸಚಿವರ ಸೂಚನೆಗಳನ್ನು ಪಾಲಿಸುವ ಕುರಿತಂತೆ ಗೊಂದಲದಲ್ಲಿದ್ದಾರೆ. ಒಬ್ಬರೇ ಸಚಿವರಿದ್ದರೆ ಕೋವಿಡ್ ನಿಯಂತ್ರಣ ಸುಲಭವಾಗುತ್ತದೆ ಎನ್ನುವ ಕಾರಣಕ್ಕೆ ಮತ್ತು ವೈದ್ಯಕೀಯ ಹಿನ್ನೆಲೆಯ ಸಚಿವರಿದ್ದರೆ ಹೆಚ್ಚು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಜವಾಬ್ದಾರಿಯನ್ನು ಡಾ.ಕೆ. ಸುಧಾಕರ್ ಗೆ ವಹಿಸಲಾಗುತ್ತಿದೆ.
ಈ ದಿಢೀರ್ ಬೆಳವಣಿಗೆ ಕುರಿತಂತೆ ಸಚಿವ ಶ್ರೀರಾಮುಲು ಬೇಸರ ಹೊರಹಾಕಿದ್ದು ರಾತ್ರಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಕೊರೋನಾ ನಿರ್ವಹಣೆಯಲ್ಲಿ ತಾವು ವಿಫಲವಾಗಿರುವ ಹಣೆಪಟ್ಟಿ ಕಟ್ಟುವುದು ಬೇಡ. ಸದ್ಯಕ್ಕೆ ಖಾತೆ ಬದಲಾವಣೆ ಮಾಡಬೇಡಿ. ಕೆಲ ದಿನಗಳ ನಂತರ ನಾನೇ ಆರೋಗ್ಯ ಇಲಾಖೆಯ ಬಿಟ್ಟು ಕೊಡುತ್ತೇನೆ ಎಂದು ಶ್ರೀರಾಮುಲು ಸಿಎಂ ಬಳಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.