ಕೊರೋನಾ ಪರಿಕರ ಖರೀದಿಯಲ್ಲಿ ಲೂಟಿ ಹೊಡೆದಿದ್ದರೆ ಸಿದ್ಧರಾಮಯ್ಯ ದಾಖಲೆ ಬಿಡುಗಡೆ ಮಾಡಲಿ ಎಂದು ಸಚಿವ ಶ್ರೀರಾಮುಲು ಸವಾಲು ಹಾಕಿದ್ದು, ಇದಕ್ಕೆ ಸಿದ್ಧರಾಂಯ್ಯ, ಬಳ್ಳಾರಿಯ ನಿಮ್ಮ ಅಣ್ಣ, ತಮ್ಮಂದಿರು ಇದೇ ರೀತಿ ಸವಾಲು ಹಾಕಿ ಕೊನೆಗೆ ದಾಖಲೆ ಬಿಡುಗಡೆ ಮಾಡಿದಾಗ ಜೈಲು ಸೇರಿದ್ದರು. ಸವಾಲೆಸೆಯುವಾಗ ಇದು ನಿಮ್ಮ ಗಮನದಲ್ಲಿರಲಿ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಆರೋಪಕ್ಕೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಸಿದ್ದರಾಮಯ್ಯನವರೇ ನಾಡು ಸಂಕಷ್ಟದಲ್ಲಿದೆ. ಜನರು ಸಮಸ್ಯೆಯಲ್ಲಿದ್ದಾರೆ. ಕೋರೋನಾ ಗೆಲ್ಲಬೇಕಿದೆ. ಇದು ಕೆಲಸ ಮಾಡುವ ಸಮಯ. ಕೆಲಸ ಮಾಡಲು ಬಿಡಿ, ನಿಮ್ಮಿಂದ ಇಷ್ಟು ಕನಿಷ್ಠ ಮಟ್ಟದ ಸಹಕಾರವನ್ನು ಕೇಳುತ್ತೇನೆ. ಜನತೆಯ ಪರವಾಗಿ ನಾನು ಸಹಕಾರವನ್ನು ಕೇಳುತ್ತಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ರಾಜ್ಯ ಸರ್ಕಾರದ ವಿರುದ್ಧ ನೀವು ಆರೋಪ ಮಾಡುತ್ತಿದ್ದೀರಿ. ಅದಕ್ಕೂ ಮುನ್ನ ನಿಮ್ಮ ಪಕ್ಷದ ಬಗ್ಗೆ ಗಮನಹರಿಸಿದರೆ ಒಳಿತು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಆರೋಪ ಮಾಡಿ ಆರೋಪಿಗಳಾಗಿರುವ ನಿಮ್ಮ ಪಕ್ಷದ ರಾಜ ಮಹಾರಾಜರ ಬಗ್ಗೆ ಗಮನಹರಿಸುವುದು ಒಳಿತಲ್ಲವೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಶ್ರೀರಾಮುಲು ಸಲಹೆ ನೀಡಿದ್ದಾರೆ.