ದಾವಣಗೆರೆ: ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಕಠಿಣ ಲಾಕ್ ಡೌನ್ ಜಾರಿ ಮಾಡಲಾಗುತ್ತದೆ ಎನ್ನುವ ಮಾತು ಕೇಳಿಬರುತ್ತಿದೆ.
ಭಾನುವಾರ ಲಾಕ್ಡೌನ್ ಜಾರಿಯಲ್ಲಿದ್ದು ಮತ್ತೆ ಲಾಕ್ಡೌನ್ ಮುಂದುವರೆಯಲಿದೆ ಎನ್ನುವ ಆತಂಕ ಜನಸಾಮಾನ್ಯರಲ್ಲಿದೆ. ಆದರೆ ಎಲ್ಲಾ ಕಡೆ ಲಾಕ್ ಡೌನ್ ಜಾರಿ ಮಾಡದೆದೇ ಕೊರೊನಾ ಸೋಂಕು ಹೆಚ್ಚಾಗಿರುವ ಪ್ರದೇಶದಲ್ಲಿ ಮಾತ್ರ ಲಾಕ್ಡೌನ್ ಜಾರಿ ಮಾಡಲಾಗುವುದು ಎಂದು ಹೇಳಲಾಗಿದೆ.
ದಾವಣಗೆರೆಯಲ್ಲಿ ಈ ಕುರಿತಾಗಿ ಮಾತನಾಡಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು, ಸೋಂಕಿತರು ಹೆಚ್ಚಾಗಿರುವ ಪ್ರದೇಶದಲ್ಲಿ ಮಾತ್ರ ಲಾಕ್ಡೌನ್ ಜಾರಿ ಮಾಡುವ ಚಿಂತನೆ ಸರ್ಕಾರದ ಮುಂದಿದೆ ಎಂದು ಸುಳಿವು ನೀಡಿದ್ದಾರೆ.
ಸೋಮವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಾಸಕರ ಸಭೆ ಕರೆದಿದ್ದು, ಎಸ್ಎಸ್ಎಲ್ಸಿ ಪರೀಕ್ಷೆ ಮುಗಿದ ನಂತರ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಆರ್. ಅಶೋಕ್ ಈಗಾಗಲೇ ತಿಳಿಸಿದ್ದಾರೆ. ಇವೆಲ್ಲ ಬೆಳವಣಿಗೆಗಳ ಬೆನ್ನಲ್ಲೇ ಈ ಕುರಿತು ಮಾತನಾಡಿದ ಸಚಿವ ಶ್ರೀರಾಮುಲು, ರಾಜ್ಯವ್ಯಾಪಿ ಮತ್ತೊಮ್ಮೆ ಲಾಕ್ ಡೌನ್ ಜಾರಿ ಮಾಡುವ ಉದ್ದೇಶವಿಲ್ಲ. ಕೊರೊನಾ ಸೋಂಕು ಹೆಚ್ಚಿದ ಪ್ರದೇಶದಲ್ಲಿ ಮಾತ್ರ ಲಾಕ್ ಡೌನ್ ಜಾರಿ ಮಾಡುವ ಚಿಂತನೆ ನಡೆದಿದೆ. ಈ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಎಂದು ತಿಳಿಸಿದ್ದಾರೆ.