ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಆದೇಶ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಬಡವರ ಜೀವನ ನಿರ್ವಹಣೆಯನ್ನ ಗಮನದಲ್ಲಿರಿಸಿ ರಾಜ್ಯ ಸರ್ಕಾರ 1250 ಕೋಟಿ ರೂಪಾಯಿ ಮೌಲ್ಯದ ವಿಶೇಷ ಆರ್ಥಿಕ ಪ್ಯಾಕೇಜ್ನ್ನು ಇಂದು ಘೋಷಣೆ ಮಾಡಿದೆ. ಈ ಪ್ಯಾಕೇಜ್ನಲ್ಲಿ ಯಾವ್ಯಾವ ವಲಯಕ್ಕೆ ಏನು ಪರಿಹಾರ ನೀಡಲಾಗಿದೆ ಅನ್ನೋದ್ರ ಬಗ್ಗೆ ಇಲ್ಲಿದೆ ಮಾಹಿತಿ.
ತೋಟಗಾರಿಕಾ ಇಲಾಖೆ :
ಹೂವು ಬೆಳೆಗಾರರಿಗಾಗಿ ಒಟ್ಟು 12.73 ಕೋಟಿ ರೂಪಾಯಿಯನ್ನ ಮೀಸಲಿಟ್ಟಿರುವ ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್ ಹೂವು ಹಾನಿಗೆ 10 ಸಾವಿರ ರೂಪಾಯಿ ಸಹಾಯ ಧನ ನೀಡೋದಾಗಿ ಹೇಳಿದೆ. ಇದರಿಂದ ಸುಮಾರು 20 ಸಾವಿರ ರೈತರಿಗೆ ಅನುಕೂಲವಾಗಲಿದೆ.
ಹಣ್ಣು ಹಾಗೂ ತರಕಾರಿ ಬೆಳೆಗಾರರಿಗೆ ಉಂಟಾದ ನಷ್ಟವನ್ನೂ ಗಮನದಲ್ಲಿಟ್ಟುಕೊಂಡಿರುವ ರಾಜ್ಯ ಸರ್ಕಾರ ಗರಿಷ್ಟ 1 ಹೆಕ್ಟೇರ್ಗೆ ಮಿತಿಗೊಳಿಸಿ ಪ್ರತಿ ಹೆಕ್ಟೇರ್ಗೆ 10 ಸಾವಿರ ರೂಪಾಯಿ ಪರಿಹಾರ ಧನ ನೀಡಲಿದೆ. ಈ ಕಾರ್ಯಕ್ಕಾಗಿ ಪ್ಯಾಕೇಜ್ನಲ್ಲಿ 69 ಕೋಟಿ ರೂಪಾಯಿಯನ್ನ ಮೀಸಲಿಡಲಾಗಿದೆ. ಇದರಿಂದಾಗಿ ಸುಮಾರು 69 ಸಾವಿರ ರೈತರಿಗೆ ಸಹಾಯವಾಗಲಿದೆ.
ಕಾರ್ಮಿಕ ಇಲಾಖೆ :
ಆಟೋ, ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ 3 ಸಾವಿರ ರೂಪಾಯಿ ಪರಿಹಾರ ಧನ ಸಿಗಲಿದೆ. ಲೈಸೆನ್ಸ್ ಹಾಗೂ ವಾಹನ ನೋಂದಣಿ ಮಾಡಿಸಿದ 2.10 ಲಕ್ಷ ಫಲಾನುಭವಿಗಳು ಇದಕ್ಕೆ ಅರ್ಹರಾಗಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ 63 ಕೋಟಿ ರೂಪಾಯಿ ಮೀಸಲಿಟ್ಟಿದೆ.
ಕ್ಷೌರಿಕರು, ಅಗಸರು, ಟೇಲರ್, ಹಮಾಲಿ, ಚಿಂದಿ ಆಯುವವರು, ಕುಂಬಾರ, ಅಕ್ಕಸಾಲಿಗ ಸೇರಿದಂತೆ ವಿವಿಧ ಅಸಂಘಟಿತ ವಲಯದ ಕಾರ್ಮಿಕರಿಗೆ 3 ಸಾವಿರ ರೂಪಾಯಿ ಪರಿಹಾರ ಧನ ಸಿಗಲಿದೆ. ಇದಕ್ಕಾಗಿ ಸರ್ಕಾರ 60.89 ಕೋಟಿ ರೂಪಾಯಿ ಹಣವನ್ನ ಖರ್ಚು ಮಾಡಲಿದೆ. 3.04 ಲಕ್ಷ ಫಲಾನುಭವಿಗಳು ಅನುದಾನ ಪಡೆಯಬಹುದಾಗಿದೆ.
ಇನ್ನು ಆತ್ಮನಿರ್ಭರ್ ನಿಧಿಯಲ್ಲಿ ನೋಂದಣಿ ಮಾಡಿಸಿದ 2.20 ಲಕ್ಷ ರಸ್ತೆ ಬದಿ ವ್ಯಾಪಾರಿಗಳಿಗೆ 2000 ರೂಪಾಯಿ ಪರಿಹಾರ ಸಿಗಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
4.82 ಕೋಟಿ ರೂಪಾಯಿ ವೆಚ್ಚದಲ್ಲಿ 16,095 ಮಂದಿ ಕಲಾವಿದರು ಹಾಗೂ ಕಲಾ ತಂಡಗಳಿಗೆ ತಲಾ 3000 ರೂಪಾಯಿ ಪರಿಹಾರ ಘೋಷಣೆಯಾಗಿದೆ.
ಸಹಕಾರ ಇಲಾಖೆ :
ರೈತರ ಹಾಗೂ ಸ್ವಸಹಾಯ ಸಂಘಗಳು. ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ ಭೂ ಅಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದವರಿಗೆ ಮರುಪಾವತಿ ದಿನಾಂಕವನ್ನ 1-05-2020 ರಿಂದ 31-07-2021 ರವರೆಗೆ ವಿಸ್ತರಣೆ ಮಾಡಲಾಗಿದೆ.
ಆಹಾರ ಇಲಾಖೆ :
ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿಯಲ್ಲಿ ಮೇ ಹಾಗೂ ಜೂನ್ ತಿಂಗಳಲ್ಲಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿ ಉಚಿತವಾಗಿ ಸಿಗಲಿದೆ. ಈ ಯೋಜನೆಗೆ ಹೆಚ್ಚುವರಿ 30 ಲಕ್ಷ ಮಂದಿಯನ್ನ ಸೇರಿಸಲಾಗಿದ್ದು ಸರ್ಕಾರವೇ ಈ ವೆಚ್ಚ ಭರಿಸಲಿದೆ. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ಉಚಿತ ಅಕ್ಕಿ ಸಿಗಲಿದೆ. ಇನ್ನು ಎಪಿಎಲ್ ಕಾರ್ಡು ದಾರರಿಗೆ ಪ್ರತಿ ಕೆಜಿ 15 ರೂಪಾಯಿ ಮೌಲ್ಯದಂತೆ 10 ಕೆಜಿ ಆಹಾರ ಧಾನ್ಯ ಸಿಗಲಿದೆ.
ನಗರಾಭಿವೃದ್ಧಿ ಇಲಾಖೆ :
ಬಿಬಿಎಂಪಿ ಹಾಗೂ ನಗರ ಪ್ರದೇಶ ವ್ಯಾಪ್ತಿಯಲ್ಲಿನ ಕಾರ್ಮಿಕರು ಹಾಗೂ ಬಡವರಿಗಾಗಿ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಇದರಿಂದ 6 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಿದೆ ಇದಕ್ಕಾಗಿ ರಾಜ್ಯ ಸರ್ಕಾ 25 ಕೋಟಿ ರೂಪಾಯಿ ಮೀಸಲಿಟ್ಟಿದೆ.
ಕೊರೊನಾ ಸೋಂಕಿಗೆ ಒಳಗಾದ ರೋಗಿಗಳಿಗೆ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಸರ್ಕಾರದಿಂದ ನಿಯೋಜಿಸಲಾದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಾಗಲಿದೆ.
18 ರಿಂದ 45ವರ್ಷದೊಳಗಿನ ಎಲ್ಲಾ ನಾಗರಿಕರಿಗೆ ಉಚಿತ ಲಸಿಕೆ ನೀಡಲು ಸರ್ಕಾರ ಉದ್ದೇಶಿಸಿದೆ. ಈಗಾಗಲೇ 3 ಕೋಟಿ ಡೋಸ್ ಲಸಿಕೆ ಖರೀದಿಗೆ ಸರ್ಕಾರ ಆದೇಶ ನೀಡಿದ್ದು ಇದಕ್ಕಾಗಿ 1 ಸಾವಿರ ಕೋಟಿ ವೆಚ್ಚ ಭರಿಸಲಾಗ್ತಿದೆ.
ಕೋವಿಡ್ ನಿರ್ವಹಣೆಗಾಗಿ ಪ್ರತಿ ಗ್ರಾಮ ಪಂಚಾಯ್ತಿಗೆ 50000 ರೂಪಾಯಿಯಂತೆ ಮುಂಗಡ ಹಣ ನೀಡಲಾಗುತ್ತೆ. 6000 ಗ್ರಾ.ಪಂಗೆ ಇದರಿಂದ ಅನುಕೂಲವಾಗಲಿದೆ. ಅಲ್ಲದೇ 3 ದಿನಗಳಲ್ಲಿ 2150 ವೈದ್ಯರನ್ನ ನೇಮಕ ಮಾಡಿಕೊಳ್ಳಲು ಸರ್ಕಾರ ಉದ್ದೇಶಿಸಿದೆ.