ನೀವೆಂದಾದರೂ ‘Sleep Internship’ ಎಂಬ ಅಭಿಯಾನದ ಬಗ್ಗೆ ಕೇಳಿದ್ದೀರಾ? ಬೆಂಗಳೂರು ಮೂಲದ ನವೋದ್ಯಮ ’ವೇಕ್‌ಫಿಟ್’ ಸ್ಥಾಪಿಸಿದ ಈ ಅಭಿಯಾನದಲ್ಲಿ, ಸತತ 100 ದಿನಗಳ ಮಟ್ಟಿಗೆ ಪ್ರತಿನಿತ್ಯ 9 ಗಂಟೆಗಳ ಕಾಲ ನಿದ್ರೆ ಮಾಡಿದವರಿಗೆ ಒಂದು ಲಕ್ಷ ರೂ.ಗಳ ಬಹುಮಾನ ಘೋಷಣೆ ಮಾಡಲಾಗಿತ್ತು.
ಆರಾಮವಾಗಿ ನಿದ್ರೆ ಮಾಡುವ ಸಾಧನೆಗೈದು ಲಕ್ಷ ರೂ.ಗಳನ್ನು ಜೇಬಿಗೆ ಇಳಿಸಿಕೊಳ್ಳುವ ಈ ಆಫರ್ ಕೊಟ್ಟಿದ್ದ ಮ್ಯಾಟ್ರೆಸ್ ಕಂಪನಿ ಕಳೆದ ವರ್ಷ ಬಲೇ ಫೇಮಸ್ ಆಗಿತ್ತು. ಇದಕ್ಕೆಂದು 1.7 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದು, ಕೇವಲ 23 ಮಂದಿ ಅಂತಿಮವಾಗಿ ಇಂಟರ್ನ್‌ಶಿಪ್‌ಗೆ ಆಯ್ಕೆಯಾಗಿದ್ದರು.
ಇದೀಗ 2021ಕ್ಕೆ ಇಂಥದ್ದೇ ಮತ್ತೊಂದು ಅಭಿಯಾನಕ್ಕೆ ಚಾಲನೆ ಕೊಡಲಿರುವ ಈ ಕಂಪನಿಯು ತನ್ನ ಜಾಲತಾಣದಲ್ಲಿ ಈ ಸಂಬಂಧ ಅರ್ಜಿಗಳನ್ನು ಆಹ್ವಾನಿಸಿದೆ.
ನಿದ್ರೆ ಬಗ್ಗೆ ಇರುವ ಧೋರಣೆಯನ್ನು ಹೋಗಲಾಡಿಸಿ, ಆರೋಗ್ಯದ ದೃಷ್ಟಿಯಿಂದ ನಿದ್ರೆ ಎಷ್ಟು ಮಹತ್ವದ್ದು ಎಂದು ಮನವರಿಕೆ ಮಾಡಿಕೊಡಲು ಈ ಅಭಿಯಾನವನ್ನು ಇಟ್ಟುಕೊಳ್ಳಲಾಗಿದೆ.
ಇಂಟರ್ನ್ ಶಿಪ್ ವೇಳೆ, ಅಭ್ಯರ್ಥಿಗಳು ತಮಗೆ ಕೊಟ್ಟ ಮ್ಯಾಟ್ರೆಸ್ ಮೇಲೆ ಸುಖವಾಗಿ ನಿದ್ರೆ ಮಾಡಿ ತೋರಿಸಬೇಕಿದೆ. ಇವರ ನಿದ್ರಾ ಶೈಲಿಯನ್ನು ಟ್ರ‍್ಯಾಕ್ ಮಾಡಲಿರುವ ತೀರ್ಪುದಾರರು, ಇಂಟರ್ನ್ ಶಿಪ್ ಅನ್ನು ಯಶಸ್ವಿಯಾಗಿ ಪೂರೈಸಿದವರಿಗೆ ಪೂರ್ತಿ ದುಡ್ಡನ್ನು ನೀಡಲಿದ್ದಾರೆ.