ಬಳ್ಳಾರಿ: ಸಹೋದರಿ ಮೇಲೆ ಅನುಮಾನಪಟ್ಟು ಅಣ್ಣನೇ ಕೊಲೆ ಮಾಡಿದ ಘಟನೆ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಕರಡಿದುರ್ಗ ಗ್ರಾಮದಲ್ಲಿ ನಡೆದಿದೆ.
28 ವರ್ಷದ ರತ್ನಮ್ಮ ಮೃತಪಟ್ಟ ಮಹಿಳೆ ಎಂದು ಹೇಳಲಾಗಿದೆ. ಆಕೆಯ ಸಹೋದರ 34 ವರ್ಷದ ಹನುಮಂತಪ್ಪ ಆರೋಪಿಯಾಗಿದ್ದಾನೆ. ತಂಗಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿದ ಹನುಮಂತಪ್ಪ ಅಕ್ಟೋಬರ್ 19 ರಂದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಮಚ್ಚಿನಿಂದ ದಾಳಿ ಮಾಡಿದ್ದು ಕುತ್ತಿಗೆ ಹಾಗೂ ತಲೆಗೆ ಗಾಯಗಳಾಗಿ ಗಂಭೀರ ಸ್ಥಿತಿಯಲ್ಲಿದ್ದ ರತ್ನಮ್ಮರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಅವರು ಮೃತಪಟ್ಟಿದ್ದಾರೆ. ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.