ಬೆಂಗಳೂರು: ಸೆಪ್ಟೆಂಬರ್ 21 ರಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದೆ. ಕೇವಲ 8 ದಿನಗಳ ಕಾಲ ಅಧಿವೇಶನ ನಡೆಸುವ ಬದಲು ಕನಿಷ್ಠ ಮೂರು ವಾರ ಅಧಿವೇಶನ ನಡೆಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ವಿಧಾನಸಭೆ ಅಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ಕನಿಷ್ಠ ಮೂರು ವಾರಗಳವರೆಗೆ ಅಧಿವೇಶನ ವಿಸ್ತರಿಸಬೇಕೆಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಸುಮಾರು 20 ಸುಗ್ರಿವಾಜ್ಞೆ ಸೇರಿ 35 ಕ್ಕೂ ಅಧಿಕ ಮಸೂದೆಗಳನ್ನು ಮಂಡಿಸಲು ಮುಂದಾಗಿದ್ದು, ಕೇವಲ 8 ದಿನದ ಅವಧಿಯಲ್ಲಿ ಇಷ್ಟೊಂದು ಮಸೂದೆಗಳ ಬಗ್ಗೆ ಚರ್ಚೆ ನಡೆಸುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಅಧಿವೇಶನದ ಅವಧಿಯನ್ನು ಕನಿಷ್ಠ ಮೂರು ವಾರ ವಿಸ್ತರಿಸಬೇಕೆಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೊರೋನಾ ಕಾರಣದಿಂದ ರಾಜ್ಯ ಸಂಕಷ್ಟದ ಸ್ಥಿತಿಯಲ್ಲಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, 6 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಉತ್ತರ ಕರ್ನಾಟಕದ ಹಲವೆಡೆ ನೆರೆ ಹಾವಳಿಯಿಂದ ಜನ ತತ್ತರಿಸಿದ್ದಾರೆ. ಕನಿಷ್ಠ 60 ದಿನಗಳ ಕಾಲ ಅಧಿವೇಶನ ನಡೆಸಬೇಕೆಂದು ರಾಜ್ಯ ವಿಧಾನಮಂಡಲ ಸರ್ಕಾರ ಕಾರ್ಯಕಲಾಪಗಳ ನಿರ್ವಹಣೆ ಅಧಿನಿಯಮ ಹೇಳುತ್ತದೆ. ಆದರೆ, ಸರ್ಕಾರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸದೆ ಪಲಾಯನ ಮಾಡಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದ್ದಾರೆ.