ಬೆಂಗಳೂರು: ಉಳುವವರಿಗೆ ಭೂಮಿ ಕೊಡಬೇಕು, ಬಡವರಿಗೆ ಭೂಮಿ ನೀಡಬೇಕೆಂಬುದು ಕಾಂಗ್ರೆಸ್ ಪಕ್ಷದ ನಿಲುವಾಗಿತ್ತು. ಅಂಬೇಡ್ಕರ್ ಅವರು ಇದನ್ನೇ ಪ್ರತಿಪಾದಿಸಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷದ ಹಿರಿಯ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಯಾರು ಬೇಕಾದರೂ ಕೃಷಿಭೂಮಿ ಖರೀದಿಸಬಹುದು ನಿಯಮ ರೂಪಿಸಿದೆ. ನಾವು ಉಳುವವರಿಗೆ ಭೂಮಿ ನೀಡಿದರೆ ಅವರು ಉಳ್ಳವರಿಗೆ ಕೃಷಿಭೂಮಿ ಧಾರೆಯೆರೆಯಲು ಹೊರಟಿದ್ದಾರೆ. ಇದರ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿ ವಿರುದ್ಧ ನಾನಾ ರೀತಿಯ ಹೋರಾಟ ರೂಪಿಸಲಾಗುವುದು. ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ. ತೈಲದ ಮೇಲೆ ತೆರಿಗೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಸುಮಾರು 18 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಿರುವ ಮಾಹಿತಿ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಲೀಟರ್ ಪೆಟ್ರೋಲ್ 25 ರೂ. ದರದಲ್ಲಿ ಮಾರಾಟವಾಗಬೇಕಿತ್ತು. ಆದರೆ ಬೆಲೆ ಹೆಚ್ಚಳದಿಂದ ಜನಸಾಮಾನ್ಯರು ತತ್ತರಿಸಿದ್ದಾರೆ ಎಂದು ದೂರಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೋನಾ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ದೇಶದ ಹಣಕಾಸು ಪರಿಸ್ಥಿತಿ ಸರಿಯಿಲ್ಲ. ಸರ್ಕಾರಗಳ ವೈಫಲ್ಯದಿಂದಾಗಿ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿದಿದೆ ಎಂದು ಟೀಕಿಸಿದ್ದಾರೆ.