‘ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ ಸಂಬಂಧ ಜೆಡಿಎಸ್ ಜೊತೆ ಚರ್ಚೆ ನಡೆಸಿದ್ದೆವು. ಆದರೆ ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವವರಿಂದ ಬೆಂಬಲ ಸಿಗಲಿಲ್ಲ ಎಂದು ಹಸಿ ಸುಳ್ಳು ಹೇಳುವ ಮೂಲಕ ಸಿದ್ಧರಾಮಯ್ಯ ಈ ಶತಮಾನದ ಮಹಾ ಸುಳ್ಳುಗಾರ ಎಂದು ಘೋಷಿಸಿಕೊಂಡಿದ್ದಾರೆ.’
ಹೀಗೆಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ. ಕಳೆದ ಶತಮಾನದಲ್ಲಿ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಅಂಟಿದ್ದ ಮಹಾನ್ ಸುಳ್ಳುಗಾರ ಎನ್ನುವ ಕಳಂಕವನ್ನು ತಾನಾಗಿಯೇ ಕಸಿದುಕೊಂಡಿರುವ ಸಿದ್ದರಾಮಯ್ಯ ಈ ಶತಮಾನದ ಮಹಾನ್ ಸುಳ್ಳುಗಾರರಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದ್ದಾರೆ.
ಮಂಡ್ಯದ ಮೂಲಕ ಇಂಡಿಯಾ ಹಿಡಿಯುವ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ ನವರು ಅನ್ನದಾತನ ಅಸ್ತ್ರ ಬಳಸಿದರೆ ಮಂಡ್ಯದ ಮಣ್ಣಿನ ಮಕ್ಕಳು ತಕ್ಕಪಾಠ ಕಲಿಸಲಿದ್ದಾರೆ. ಅನ್ನದಾತರ ಬಗೆಗಿನ ಬದ್ಧತೆ ಬಗ್ಗೆ ನಿಮ್ಮೆಲ್ಲರಿಗಿಂತ ಹೆಚ್ಚಿನ ಕರುಳಬಳ್ಳಿಯ ಸಂಬಂಧ ಜೆಡಿಎಸ್ ಪಕ್ಷಕ್ಕೆ ಇದೆ ಎಂದು ತಿಳಿಸಿದ್ದಾರೆ.
ಜೆಡಿಎಸ್ ನೊಂದಿಗೆ ಯಾವುದೇ ಮಾತುಕತೆ ನಡೆಸದೆ ಸಿದ್ದರಾಮಯ್ಯ ಹಸಿ ಸುಳ್ಳು ಹೇಳುವ ಮೂಲಕ ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ ಎಲುಬಿಲ್ಲದ ನಾಲಿಗೆಯನ್ನು ಹರಿಯಬಿಟ್ಟು ನಗೆಪಾಟಲಿಗೆ ಈಡಾಗಿದ್ದಾರೆ. ಬಾಯಿ ಚಪಲಕ್ಕೆ ಸುಳ್ಳುಗಳನ್ನು ಹೇಳುವ ಚಾಳಿಯನ್ನು ಸಿದ್ದರಾಮಯ್ಯ ಇನ್ನಾದರೂ ಬಿಡಬೇಕೆಂದು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯನವರ ಕಾಲದಲ್ಲಿ ಮಾಡಿದ ಸಾಲ ಮನ್ನಾದಲ್ಲಿ ಲೋಪ ದೋಷಗಳು ಇದ್ದವು ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದೆ. ನಾನು ಮಾಡಿದ 25 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾದಲ್ಲಿ ಅನ್ಯಾಯಗಳನ್ನು ಸರಿಪಡಿಸಿದ್ದೆ. ಇದರಲ್ಲಿ ಹುಳುಕು ಹುಡುಕುವ ಕಾಂಗ್ರೆಸ್ ನಾಯಕರು ಅನ್ನದಾತನಿಗೆ ಮಂಕುಬೂದಿ ಎರಚಲು ಯತ್ನಿಸಿದ್ದಾರೆ. ನಾನು ಚುನಾವಣೆ ಬಂದಾಗ ಜಾತಿ ಕಾರ್ಡ್ ಪ್ಲೇ ಮಾಡುತ್ತೇನೆ ಎಂದು ಮೂದಲಿಸುವ ಸಿದ್ದರಾಮಯ್ಯ ‘ಅಹಿಂದ’ರಾಮಯ್ಯ ಆಗಿದ್ದು ಏಕೆ? ನಕಲಿ ಸಮಾಜವಾದಿಯ ‘ಅಹಿಂದ’ ಮುಖವಾಡ ಇಡೀ ನಾಡಿಗೆ ಗೊತ್ತಿದೆ ಎಂದು ಹೇಳಿದ್ದಾರೆ.
ರೈತರ ಪರ ಕಾಳಜಿ, ಬದ್ಧತೆಯನ್ನು ಸಿದ್ಧರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಂದ ಜೆಡಿಎಸ್ ಕಲಿಯಬೇಕಿರುವುದು ಏನೂ ಇಲ್ಲ. ಸಂತೆ ಭಾಷಣ ಮಾಡುವ ಸಿದ್ಧರಾಮಯ್ಯ ವಿದೂಷಕನಂತೆ ಜೆಡಿಎಸ್ ವಿರುದ್ಧ ಹರಿಹಾಯುತ್ತಿರುವುದು ಪ್ರತಿ ಪಕ್ಷದ ಪಕ್ಷದ ನಾಯಕನಿಗೆ ಭೂಷಣವಲ್ಲ ಎಂದು ತಿಳಿಸಿದ್ದಾರೆ.