‘ರಾಜ್ಯದ ಜನ ಕೇಳುತ್ತಿದ್ದಾರೆ ಲೆಕ್ಕ ಕೊಡಿ ಅಭಿಯಾನ’ವನ್ನು ಕಾಂಗ್ರೆಸ್ ಪಕ್ಷದಿಂದ ಆರಂಭಿಸಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಈ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ.
ಕೊರೊನಾ ಸೋಂಕು ಬಂದಾಗಿನಿಂದ ಇದುವರೆಗೆ ರಾಜ್ಯ ಸರ್ಕಾರ ಖರ್ಚು ಮಾಡಿದ ಹಣ ಎಷ್ಟು…? ಕೇಂದ್ರ ಸರ್ಕಾರ ಎಷ್ಟು ನೀಡಿದೆ..? ಯಾವ ಯಾವ ಇಲಾಖೆ ಯಾವ ಯಾವ ಬಾಬತ್ತಿಗೆ ಎಷ್ಟು ಹಣ ಖರ್ಚು ಮಾಡಿದೆ…?
ಪಿಪಿಇ ಕಿಟ್, ಟೆಸ್ಟ್ ಕಿಟ್, ಗ್ಲೌಸ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್, ಕಿಯೋಸ್ಕ್ ಮುಂತಾದವುಗಳಿಗೆ ಮಾರುಕಟ್ಟೆ ದರ ಎಷ್ಟು…? ನೀವು ಪ್ರತಿಯೊಂದನ್ನು ಯಾವ ದರಕ್ಕೆ ಖರೀದಿಸಿದ್ದೀರಿ…?
ಇದುವರೆಗೆ ಎಷ್ಟು ಫುಡ್ ಕಿಟ್…? ಎಷ್ಟು ಫುಡ್ ಪ್ಯಾಕೆಟ್ ಕೊಡಲಾಗಿದೆ…? ಯಾರಿಗೆ ಕೊಡಲಾಗಿದೆ….? ಪ್ರತಿಯೊಂದಕ್ಕೆ ಎಷ್ಟು ಹಣ ಖರ್ಚು ಮಾಡಲಾಗಿದೆ…? ತಾಲೂಕುವಾರು, ವಾರ್ಡವಾರು ಲೆಕ್ಕಕೊಡಿ.
ವಲಸೆ ಕಾರ್ಮಿಕರಿಗೆ ಪ್ರಯಾಣದ ಸಂದರ್ಭದಲ್ಲಿ ಎಷ್ಟು ಫುಡ್ ಪ್ಯಾಕೇಟ್ ಕೊಡಲಾಗಿದೆ…? ಏನೇನು ಕೊಟ್ಟಿದ್ದೀರಿ….? ಇದಕ್ಕಾಗಿ ಖರ್ಚು ಮಾಡಿದ ಹಣ ಎಷ್ಟು…?
ಸಂಕಷ್ಟದಲ್ಲಿರುವ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸಿದ ಪ್ಯಾಕೇಜ್ ಮಾಹಿತಿ ಕೊಡಿ. ಯಾವ ವೃತ್ತಿಯವರಿಗೆ….? ಯಾವ ಯಾವ ಸಮುದಾಯಕ್ಕೆ ಎಷ್ಟು ಹಣ ಬಿಡುಗಡೆಯಾಗಿದೆ. ಕೊರೋನಾ ಸಂತ್ರಸ್ತರ ಆರೈಕೆಗೆ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬುದರ ಸಂಪೂರ್ಣ ಲೆಕ್ಕ ಕೊಡಿ ಎಂದು ಕೇಳಲಾಗಿದೆ.
ಲೆಕ್ಕ ಕೇಳುವುದು ರಾಜ್ಯದ ಜನರ ಹಕ್ಕು, ಲೆಕ್ಕ ಕೊಡುವುದು ನಿಮ್ಮ ಕರ್ತವ್ಯ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ 6 ಪ್ರಶ್ನೆಗಳನ್ನು ಕೇಳಿರುವ ವಿಡಿಯೋ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ ಪಕ್ಷದ ಎಲ್ಲಾ ಶಾಸಕರು, ಸಂಸದರು, ಕಾರ್ಯಕರ್ತರು, ವಿಡಿಯೋ ಶೇರ್ ಮಾಡುವ ಮೂಲಕ ಅಭಿಯಾನದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.