ಬೆಂಗಳೂರು: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರ ರಂಗೇರಿದ್ದು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ.
ಅಡ್ಡಿಪಡಿಸಿದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಯಶವಂತಪುರದ ಬಿಕೆ ನಗರದಲ್ಲಿ ಕುಸುಮಾ ಪರವಾಗಿ ಸಿದ್ದರಾಮಯ್ಯ ಪ್ರಚಾರ ನಡೆಸುವ ವೇಳೆ ಬಿಜೆಪಿ ಕಾರ್ಯಕರ್ತರು ಅಡ್ಡಿ ಮಾಡಿದ್ದಾರೆ.
ಈ ವೇಳೆ ಮೋದಿ ಪರ ಘೋಷಣೆ ಕೂಗಿ ಪ್ರಚಾರಕ್ಕೆ ಅಡ್ಡಿಪಡಿಸಿದ್ದು ಸಿದ್ದರಾಮಯ್ಯ ನಗರ ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ಪ್ರಚಾರ ಮುಂದುವರಿಸಿದ್ದಾರೆ. ಬಿಜೆಪಿ ಕಾರ್ಯಕರ್ತರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯ ಪ್ರಚಾರಕ್ಕೆ ತಡೆಯೊಡ್ಡಿದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಬೇಕೆಂದು ಆಗ್ರಹಿಸಿ ಸಂಸದ ಡಿ.ಕೆ. ಸುರೇಶ್, ಅಭ್ಯರ್ಥಿ ಕುಸುಮಾ ಮೊದಲಾದವರು ಯಶವಂತಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಗಿದೆ. ಬಿಜೆಪಿ ಮಾಜಿ ಕಾರ್ಪೊರೇಟರ್ ವಿರುದ್ಧ ಕೇಸ್ ದಾಖಲಿಸಲಾಗಿದೆ.