alex Certify ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಶಾಕ್: 1200 ಕ್ಕೂ ಹೆಚ್ಚು ಪ್ರಶ್ನೆಗಳ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಶಾಕ್: 1200 ಕ್ಕೂ ಹೆಚ್ಚು ಪ್ರಶ್ನೆಗಳ ಸುರಿಮಳೆ

ಬೆಂಗಳೂರು: ಸೆ. 21 ರಿಂದ ಆರಂಭವಾಗುವ ವಿಧಾನ ಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು 1,200 ಕ್ಕೂ ಹೆಚ್ಚು ಪ್ರಶ್ನೆಗಳನ್ನು ಸರ್ಕಾರದ ಮುಂದೆ ಇಡಲಿದ್ದಾರೆ.

ಪ್ರಶ್ನೆಗಳು ಈಗಾಗಲೇ ಸಿದ್ಧವಾಗಿದ್ದು ಅದನ್ನು ವಿಧಾನಸಭೆ ಹಾಗೂ ವಿಧಾನಸಭೆ ಸಚಿವಾಲಯಕ್ಕೆ ಸಲ್ಲಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶಾಸಕರಿಗೆ ಮನವಿ ಮಾಡಿದ್ದಾರೆ.

ಮಾಜಿ ಸಚಿವರ ತಂಡ ಪ್ರಶ್ನೆಗಳನ್ನು ಸಿದ್ಧಪಡಿಸಿದ್ದು, ಈ ವಿಷಯದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿ ಹಾಗೂ ವಿಧಾನಸಭೆ, ವಿಧಾನ ಪರಿಷತ್‍ನ ವಿರೋಧ ಪಕ್ಷದ ಮುಖ್ಯ ಸಚೇತಕರ ಕಚೇರಿ ಶಾಸಕರಿಗೆ ನೆರವಾಗಲಿದೆ ಎಂದು ಹೇಳಿದ್ದಾರೆ.

ಅಧಿವೇಶನದಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಬಗ್ಗೆ ಸಿದ್ದರಾಮಯ್ಯ ಅವರು ಇಂದು ಝೂಮ್ ಮೂಲಕ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಹಿರಿಯ ನಾಯಕರಾದ ಹೆಚ್.ಕೆ. ಪಾಟೀಲ್, ಆರ್.ವಿ. ದೇಶಪಾಂಡೆ ಮತ್ತಿತರರು ಸೇರಿದಂತೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು ಚರ್ಚೆಯಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರ ಹಲವಾರು ವಿಷಯಗಳಲ್ಲಿ ಎಡವಿದೆ. ಕೊರೊನಾ ಸೋಂಕು ನಿಯಂತ್ರಣದಲ್ಲಂತೂ ಸಂಪೂರ್ಣವಾಗಿ ವಿಫಲವಾಗಿದೆ. ಈ ಕುರಿತು ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚೆ ನಡೆಸಬೇಕಿದೆ. ಕೋವಿಡ್ ಉಪಕರಣಗಳ ಖರೀದಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆಯೂ ನಮ್ಮ ಪಕ್ಷ ಸದನದಲ್ಲಿ ಗಂಭೀರವಾಗಿ ಪ್ರಶ್ನೆ ಮಾಡಬೇಕಿದೆ ಎಂದು ಹೇಳಿದ್ದಾರೆ.

ಸರ್ಕಾರದಲ್ಲಿ ಕೆಲಸ ನಡೆಯುತ್ತಿಲ್ಲ. ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಸರ್ಕಾರ ಇದ್ದರೆ ಸ್ವರ್ಗ ಸೃಷ್ಟಿಯಾಗುತ್ತದೆ. ಕೇಂದ್ರದಿಂದ ನಾವು ಸಾಕಷ್ಟು ನೆರವು ಪಡೆಯುತ್ತೇವೆ ಎಂದು ಯಡಿಯೂರಪ್ಪ ಮತ್ತಿತರ ನಾಯಕರು ಹೇಳಿದ್ದರು. ಜಿಎಸ್‍ಟಿ ವಿಚಾರದಲ್ಲಿ ಪರಿಹಾರ ಕೇಳಿದರೆ ನೀವು ಸಾಲ ಮಾಡಿ ನಷ್ಟ ತುಂಬಿಕೊಳ್ಳಿ ಎಂದು ಕೇಂದ್ರದ ಹಣಕಾಸು ಸಚಿವರು ಹೇಳುತ್ತಾರೆ. ಇಂಥ ವಿಷಯಗಳ ಮೇಲೆಯೂ ಪ್ರಶ್ನೆ ಮಾಡಬೇಕಿದೆ. ರಾಜ್ಯದಲ್ಲಿ ಆಯ್ಕೆಯಾಗಿ ಹೋಗಿರುವ 25 ಸಂಸದರು ಈ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ಸ್ವರ್ಗ ಸೃಷ್ಟಿ ಮಾಡುತ್ತೇವೆ ಎಂದಿದ್ದ ಯಡಿಯೂರಪ್ಪ ಅವರು ಉಸಿರು ಎತ್ತುತ್ತಿಲ್ಲ. ಬಿಜೆಪಿಯೇತರ ರಾಜ್ಯ ಸರ್ಕಾರಗಳು ಮಾತ್ರ ಕೇಂದ್ರದ ನಡೆಯನ್ನು ಟೀಕಿಸಿವೆ. ಬಿಜೆಪಿ ಸರ್ಕಾರಗಳು ಕೋಲೆ ಬಸವನ ರೀತಿ ತಲೆ ಆಡಿಸುತ್ತಿವೆ ಎಂದು ದೂರಿದ್ದಾರೆ.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಈ ಕುರಿತು ಮಂತ್ರಿಗಳೇ ಅಲ್ಲಲ್ಲಿ ಮಾತನಾಡುತ್ತಿದ್ದಾರೆ. ಪರ್ಸೆಂಟೇಜ್ ಕೊಡದ ಶಾಸಕರ ಕ್ಷೇತ್ರಗಳಿಗೆ ಅನುದಾನ ಇಲ್ಲ ಎಂಬಂತೆ ಆಗಿದೆ. ಬಿಜೆಪಿ ಮಂತ್ರಿಗಳ ಕ್ಷೇತ್ರದಲ್ಲಿಯೂ ಅನುದಾನಕ್ಕಾಗಿ ಲಂಚ ನೀಡಬೇಕಾದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತಾಗಿಯೂ ಸದನದಲ್ಲಿ ಚರ್ಚೆ ಕೈಗೆತ್ತಿಕೊಳ್ಳಬೇಕಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿ ತುಕಾರಾಂ, ವಿಧಾಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಅಜಯ್ ಸಿಂಗ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ನಾರಾಯಣಸ್ವಾಮಿ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...