ಬೆಂಗಳೂರು: ಮೊದಲು ಪಕ್ಷ ಅಧಿಕಾರಕ್ಕೆ ಬರಲಿ, ನಂತರ ಮುಖ್ಯಮಂತ್ರಿ ಹುದ್ದೆ ಬಗ್ಗೆ ಚರ್ಚೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಮಾತನಾಡಿದ ಅವರು, ಮೊದಲು ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು. ನಂತರ ಶಾಸಕರು, ಹೈಕಮಾಂಡ್ ಮುಖ್ಯಮಂತ್ರಿ ಯಾರಾಗಬೇಕೆಂದು ತೀರ್ಮಾನಿಸುತ್ತಾರೆ. ಪಕ್ಷದಲ್ಲಿ ಅನೇಕರು ಅನೇಕ ಆಸೆಗಳನ್ನು ವ್ಯಕ್ತಪಡಿಸಿದರೆ ನಾನು ಜವಾಬ್ದಾರನಲ್ಲ ಎಂದು ಹೇಳಿದ್ದಾರೆ.
ಕೆಲವರು ನಮ್ಮಗಳ ಮೇಲಿನ ಪ್ರೀತಿಯಿಂದ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳುತ್ತಿದ್ದಾರೆ. ಆದರೆ, ನಮ್ಮ ಪಕ್ಷ ಮೊದಲು ಅಧಿಕಾರಕ್ಕೆ ಬರಬೇಕು. ನಂತರ ಶಾಸಕರು, ಹೈಕಮಾಂಡ್ ಸಿಎಂ ಬಗ್ಗೆ ತೀರ್ಮಾನಿಸುತ್ತಾರೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧವಾಗಿ ಇರುತ್ತೇನೆ. ನಾನು ಸಾಮೂಹಿಕ ನಾಯಕತ್ವವನ್ನು ನಂಬುತ್ತೇನೆ ಎಂದು ಅವತ್ತು ಹೇಳಿದ್ದೆ. ಇವತ್ತು ಕೂಡ ಅದೇ ಮಾತನ್ನು ಹೇಳುತ್ತೇನೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಅವರು ಹೀಗೆ ಹೇಳುವ ಮೂಲಕ ಮುಖ್ಯಮಂತ್ರಿಯಾಗುವ ಇಂಗಿತ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿದ್ಧರಾಮಯ್ಯ ಮತ್ತೊಮ್ಮೆ ಸಿಎಂ ಆಗ್ತಾರೆ ಎಂದು ಹೇಳುತ್ತಿದ್ದ ಅವರ ಬೆಂಬಲಿಗರ ಕಾಲೆಳೆದಿದ್ದಾರೆ ಎನ್ನಲಾಗಿದೆ.