ಬೆಂಗಳೂರು: ಮನೆ ಭದ್ರತೆಗಾಗಿ ನೇಮಕಗೊಂಡಿದ್ದ ಸೆಕ್ಯೂರಿಟಿ ಗಾರ್ಡ್ ಅದೇ ಮನೆಯಲ್ಲಿ ಕಳ್ಳತನ ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ. ಬೆಂಗಳೂರಿನ ಕೆ.ಜಿ.ಹಳ್ಳಿ ಅಪಾರ್ಟ್ ಮೆಂಟ್ ಒಂದರಲ್ಲಿ ಈ ಘಟನೆ ನಡೆದಿದೆ.
ಕೆ.ಜಿ.ಹಳ್ಳಿ ವ್ಯಾಪ್ತಿಯ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಾಗಿದ್ದ ದೀಪಕ್ ಎಂಬುವವರು ಕುಟುಂಬ ಸಮೇತ ತಿರುಪತಿಗೆ ಹೋಗಿದ್ದರು. ಈ ವೇಳೆ ಸಂಜಯ್ ಎಂಬ ಸೆಕ್ಯೂರಿಟಿ ಗಾರ್ಡ್ ಗೆ ಮನೆ ನೋಡಿಕೊಳ್ಳುವಂತೆ ತಿಳಿಸಿ ಹೋಗಿದ್ದರು. ದೀಪಕ್ ಹಾಗೂ ಕುಟುಂಬ ಬೆಂಗಳೂರಿಗೆ ವಾಪಸ್ ಆದಾಗ ಮನೆಯಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. 49 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದರು.
ಮನೆಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮರಾ ಪರಿಶೀಲಿಸಿದಾಗ ಮನೆಯ ಸೆಕ್ಯೂರಿಟಿ ಗಾರ್ಡ್ ಸಂಜಯ್ ತನ್ನ ಸ್ನೇಹಿತರ ಜೊತೆ ಸೇರಿ ಕಳ್ಳತನವೆಸಗಿರುವುದು ಬಹಿರಂಗವಾಗಿದೆ. ಈ ಕುರಿತು ಮನೆ ಮಾಲೀಕ ದೀಪಕ್ ಕೆ.ಜಿ.ಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.