ಬೆಂಗಳೂರು: ಕೊರೊನಾ 2 ನೇ ಅಲೆ ಅಬ್ಬರದ ನಡುವೆಯೂ ರಾಜ್ಯದಲ್ಲಿ ನಡೆದ ಉಪಚುನಾವಣೆ ಇದೀಗ ಶಿಕ್ಷಕರನ್ನು ಬಲಿ ಪಡೆದುಕೊಳ್ಳುತ್ತಿದೆ. ಬೈಲೆಕ್ಷನ್ ಕರ್ತವ್ಯಕ್ಕೆ ಹಾಜರಾಗಿದ್ದ 30ಕ್ಕೂ ಹೆಚ್ಚು ಶಿಕ್ಷಕರು ಕೊರೊನಾ ಮಹಾಮಾರಿಗೆ ಬಲಿಯಾಗಿರುವುದು ಬೆಳಕಿಗೆ ಬಂದಿದೆ.
ಉಪಚುನಾವಣಾ ಡ್ಯೂಟಿಗೆ ಹೋಗಿದ್ದ ಶಿಕ್ಷಕ-ಶಿಕ್ಷಕೀಯರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಅವರಲ್ಲಿ ಹಲವರು ಸಾವನ್ನಪ್ಪಿದ್ದಾರೆ. ಶಿಕ್ಷಕರ ಕುಟುಂಬಗಳು ಬೀದಿ ಪಾಲಾಗಿ ಕಣ್ಣೀರಿಡುತ್ತಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ.
ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಹಾಗೂ ಬೆಳಗಾವಿ ಲೋಕಸಭಾ ಉಪಚುನಾವಣೆ ಮತ್ತು ನಗರಸಭೆ ಚುನಾವಣೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಹಲವು ಶಿಕ್ಷಕರಲ್ಲಿ ಕೊರೊನಾ ಸೋಂಕು ಹರಡಿದೆ. ಅವರಲ್ಲಿ 30ಕ್ಕೂ ಹೆಚ್ಚು ಶಿಕ್ಷಕರು ಸೋಂಕಿಗೆ ಸಾವನ್ನಪ್ಪಿದ್ದಾರೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ಶಿವಕುಮಾರ್ ಭಾವು (53) ನರೇಂದ್ರ ಪಾಟೀಲ್ (47), ಪ್ರಕಾಶ್ ಲಕ್ಕಶೆಟ್ಟಿ (54), ಚಂದ್ರಶೇಖರ್ ಗಚ್ಚಿಮಠ (51), ಎಸ್.ಎಸ್. ಭರಾಟೆ (42), ರವಿಂದ್ರನಾಥ ಬಶಟ್ಟಿ (58), ಸಂಗಪ್ಪ ವಾನೆ (43) ರಾಜೇಶ್ವರಿ (41), ಶ್ರೀದೇವಿ (52), ಪ್ರಕಾಂಶ್ ಮಂತ್ರೆ (36) ಸೇರಿದಂತೆ ಹಲವು ಶಿಕ್ಷಕರು ಕೋವಿಡ್ ನಿಂದ ಮೃತಪಟ್ಟಿದ್ದಾರೆ ಎಂದು ಇಲಾಖೆ ತಿಳಿಸಿದೆ. ತಂದೆ-ತಾಯಿಯನ್ನು ಕಳೆದುಕೊಂಡ ಶಿಕ್ಷಕರ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.