ಶಿವಮೊಗ್ಗ: ಗ್ರಾಮಾಂತರ ಠಾಣೆ ಪೊಲೀಸರು ಹಲವೆಡೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ನಗದು, ಸ್ವತ್ತು ವಶಕ್ಕೆ ಪಡೆದುಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಎಂ. ಶಾಂತರಾಜ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ಶೇಖರ್, ಉಪಾಧೀಕ್ಷಕ ಉಮೇಶ್ ಈಶ್ವರ ನಾಯ್ಕ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಸಿಪಿಐ ಸಂಜೀವ್ ಕುಮಾರ್ ನೇತೃತ್ವದಲ್ಲಿ ಪಿಎಸ್ಐ ಗಳಾದ ಸುರೇಶ್ ಮತ್ತು ಡಿ. ಹನುಮಂತಪ್ಪ ಹಾಗೂ ಗ್ರಾಮಾಂತರ ಠಾಣಾ ಸಿಬ್ಬಂದಿ ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.
ಜೂನ್ 13 ರಂದು ಶಿವಮೊಗ್ಗ ಗ್ರಾಮಾಂತರ ಠಾಣೆಗೆ ವ್ಯಾಪ್ತಿಯ ಹರಿಗೆ ಹಾಥಿನಗರ ಪಾರ್ಕ್ ಬಳಿ ದಾಳಿ ಮಾಡಿದ್ದು ಹರಿಗೆ ನಿವಾಸಿ ಪುನೀತ್ ಎಂಬುವನನ್ನು ಬಂಧಿಸಿ ಸುಮಾರು 500 ಗ್ರಾಂ ಗಾಂಜಾ ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜೂನ್ 15 ರಂದು ಶಿವಮೊಗ್ಗ ಗ್ರಾಮಾಂತರ ಠಾಣೆಯ ಚಿಕ್ಕಲ್ ಮುಖ್ಯರಸ್ತೆಯಲ್ಲಿ ಚನ್ನಗಿರಿ ತಾಲೂಕು ತ್ಯಾವಣಿಗೆರೆ ಗ್ರಾಮದ ವಾಸಿ ರವಿ ಎಂಬುವನನ್ನು ಬಂಧಿಸಿ ಸುಮಾರು 3 ಕೆಜಿ ತೂಕದ ಶ್ರೀಗಂಧ ವಶಕ್ಕೆ ಪಡೆಯಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜೂನ್ 16 ರಂದು ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕುಂಚೇನಹಳ್ಳಿ ಗ್ರಾಮದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಟಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ 2.17 ಲಕ್ಷ ರೂಪಾಯಿ ನಗದು ಹಾಗೂ 7 ದ್ವಿಚಕ್ರ ವಾಹನ ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮೇ 8 ರಂದು ಮಾಚೇನಹಳ್ಳಿಯ ಆಂಜನೇಯ ದೇವಾಲಯದಲ್ಲಿ ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 27 ರಂದು ಮೂರು ಜನ ಆರೋಪಿಗಳಾದ ಮಾಚೇನಹಳ್ಳಿ ಮಂಜ, ಜಯಂತಿ ಗ್ರಾಮದ ಚಿನ್ನಪ್ಪ ಮತ್ತು ಮಂಜು ಎಂಬುವರನ್ನು ದಸ್ತಗಿರಿ ಮಾಡಿ ಒಂದು ಕಾಣಿಕೆ ಡಬ್ಬಿ, ಕಳವು ಮಾಡಿದ 1800 ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ.
ಜೂನ್ 26 ರಂದು ಬೀರನಕೆರೆ ಗ್ರಾಮದ ಪೂರ್ಯ ನಾಯ್ಕ್ ಅವರ ಬಗರುಹುಕುಂ ಜಮೀನಿನಲ್ಲಿ ಬೆಳೆದ 1 ಕೆಜಿ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದುಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ