ಶಿವಮೊಗ್ಗ: ಇದು ಪ್ರತಿ ದಿನ ಕೊರೊನಾ ಸೋಂಕಿಗೆ ತುತ್ತಾದವರನ್ನು ನೋಡಿ ಅವರ ಸ್ಥಿತಿಯನ್ನು ಕಂಡು ಆತ್ಮ ಸ್ಥರ್ಯವೇ ಉಡುಗಿ ಹೋಗುತ್ತಿರುವ ಸಂದರ್ಭಲ್ಲಿರುವ ನಮ್ಮೆಲ್ಲರಿಗೂ ಧೈರ್ಯವನ್ನು ಹೆಚ್ಚಿಸುವ ಸ್ಟೋರಿ… ಕೊರೊನಾ ಎರಡನೇ ಅಲೆ ಅಬ್ಬರಕ್ಕೆ ನಲುಗುತ್ತಿರುವ ನಮ್ಮ ರಾಜ್ಯದಲ್ಲಿ 92 ವರ್ಷದ ವೃದ್ಧೆ ಸೇರಿ ಒಂದೇ ಕುಟುಂಬದ 11 ಜನರು ಮಹಾಮಾರಿಯನ್ನು ಗೆದ್ದು ಬೀಗಿರುವ ಸಂತಸದ ವಿಚಾರವೊಂದು ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗದ ಶಿಕಾರಿಪುದಲ್ಲಿ ಬೆಳಕಿಗೆ ಬಂದಿದೆ.
ಕೊರೊನಾ ಸೋಂಕಿತರ ಜೊತೆಗೆ ಸಾವಿನ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ಗುಣಮುಖರಾಗುತ್ತಿರುವವರ ಪ್ರಮಾಣವೂ ಕಂಡುಬರುತ್ತಿದೆ. ಶಿಕಾರಿಪುರದ ಶಿರಾಳಕೊಪ್ಪ ಸಮೀಪದ ತಾಳಗುಂದ ಹೋಬಳಿಯ ಮಾಳಗೊಂಡನಕೊಪ್ಪ ಗ್ರಾಮದ 92 ವರ್ಷದ ವೃದ್ಧೆ ಇಂದಿರಾಬಾಯಿ, 72 ವರ್ಷದ ಮಗ ಸುಶಿಲೇಂದ್ರರಾವ್ ಹಾಗೂ ಮಕ್ಕಳು, ಮೊಮ್ಮಕ್ಕಳು ಸೇರಿ ಕುಟುಂಬದ 11 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಇದೀಗ ಸೂಕ್ತ ಚಿಕಿತ್ಸೆ ಬಳಿಕ ಎಲ್ಲರೂ ಗುಣಮುಖರಾಗಿದ್ದಾರೆ.
ಈ ಕುಟುಂಬದ ಕೆಲವರು ಏಪ್ರಿಲ್ 4ರಂದು ಬೆಂಗಳೂರಿನಲ್ಲಿ ಸಂಬಂಧಿಕರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಊರಿಗೆ ವಾಪಸ್ಸಾಗಿದ್ದ ಅವರಲ್ಲಿ ಜ್ವರ ಕಾಣಿಸಿಕೊಂಡಿತ್ತು. ಅನುಮಾನಗೊಂಡು ಕೋವಿಡ್ ಟೆಸ್ಟ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ಬಂದಿತ್ತು. ಇದರ ಬೆನ್ನಲ್ಲೇ ಮನೆಯ ಹಿರಿಯರಿಂದ ಹಿಡಿದು ಚಿಕ್ಕ ಮಕ್ಕಳವರೆಗೂ ಸೋಂಕು ಹರಡಿತ್ತು. 92 ವರ್ಷದ ಹಿರಿಯಜ್ಜಿಯಿಂದ ಹಿಡಿದು 9 ವರ್ಷದ ಮರಿಮಕ್ಕಳವರೆಗೂ ಕುಟುಂಬದ 11 ಸದಸ್ಯರು ಶಿಕಾರಿಪುರ ತಾಲೂಕು ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದಿದ್ದರು. ಇದೀಗ ಎಲ್ಲರೂ ಗುಣಮುಖರಾಗಿದ್ದು ಕೊರೊನಾ ಗೆದ್ದು ಬಂದ ಖುಷಿಯಲ್ಲಿದ್ದಾರೆ.