ಬಳಸಿದ ನಿಮ್ಮ ಮನೆಯ ವಸ್ತುವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಉತ್ಸುಕರಾಗಿದ್ದೀರಾ? ಹಾಗಿದ್ದರೆ ಒಮ್ಮೆ ಈ ಸುದ್ದಿ ಗಮನವಿಟ್ಟು ಓದಿ.
ಆನ್‌ಲೈನ್ ವಂಚಕರ ಹಾವಳಿ ವಿಪರೀತವಾಗಿದ್ದು, ಇವರ ದಾಳಿಗೆ ಟೆಕ್ಕಿಗಳಿಬ್ಬರು ಸಾವಿರಾರು ರೂಪಾಯಿ ಕಳೆದುಕೊಂಡಿದ್ದಾರೆ.
ತಮ್ಮ ಹಾಸಿಗೆಗಳನ್ನು ಮಾರಾಟ ಮಾಡಲು ಒಎಲ್ಎಕ್ಸ್ ಜಾಹೀರಾತುಗಳನ್ನು ಪ್ರತ್ಯೇಕವಾಗಿ ಪೋಸ್ಟ್ ಮಾಡಿದ ಇಬ್ಬರು ಟೆಕ್ಕಿಗಳು ಹಣ ಕಳೆದುಕೊಂಡಿದ್ದಾರೆ.
ವಂಚಕರು ಅವರನ್ನು ಸಂಪರ್ಕಿಸಿ ಅವರು ಮಾರಾಟಕ್ಕೆ ಪೋಸ್ಟ್ ಮಾಡಿದ ವಸ್ತುವಿನ ಬಗ್ಗೆ ಆಸಕ್ತಿ ತೋರಿಸಿದರು. ಬಳಿಕ, ಅವರು ಕಳುಹಿಸಿದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ಸೂಚಿಸಿದ್ದಾರೆ.
ಅಚ್ಚರಿ ಎಂದರೆ ಮಾರಾಟವಾಗುವ ವಸ್ತುವಿಗೆ ಹಣವನ್ನು ಸ್ವೀಕರಿಸುವ ಬದಲು, ಇಬ್ಬರು ಟೆಕ್ಕಿಗಳು ತಮ್ಮ ಬ್ಯಾಂಕ್ ಖಾತೆಗಳಿಂದ ಹಣವನ್ನು ಕಳೆದುಕೊಂಡಿದ್ದಾರೆ.
ಕ್ಯೂಆರ್ ಕೋಡ್ ಅನ್ನು ಬಳಸುವುದು ಆನ್‌ಲೈನ್ ವಂಚನೆಯ ಸಾಮಾನ್ಯ ಸ್ವರೂಪವಾಗಿದೆ ಮತ್ತು
ಕಳೆದ ಎರಡು ವರ್ಷಗಳಲ್ಲಿ ಹೆಚ್ಚಿನ ಜನರು ಈ ವಿಧಾನಕ್ಕೆ ಬಲಿಯಾಗುತ್ತಿದ್ದಾರೆ ಎಂದು ಸೈಬರ್ ಕ್ರೈಮ್ ಪೊಲೀಸರು ವಿವರಿಸಿದ್ದಾರೆ.
ಮೊದಲ ಘಟನೆಯಲ್ಲಿ, ಕಸವನಹಳ್ಳಿಯ 29 ವರ್ಷದ ಸಪ್ನಾ ಬುಲ್ಚಂದಾನಿ 60,000 ರೂ. ಮೌಲ್ಯದ
ಹಾಸಿಗೆಯನ್ನು ಮಾರಾಟ ಮಾಡಲು ಅಕ್ಟೋಬರ್ 30ರಂದು ಒಎಲ್ಎಕ್ಸ್ ನಲ್ಲಿ ಹಾಕಿದ್ದರು. 29 ವರ್ಷದ ತೇಜಸ್ವಿ ಸಿಂಗ್ ಎಂಬ ಮತ್ತೊಬ್ಬ ಟೆಕ್ಕಿ ಅ.25ರಂದು ತನ್ನ ಹಾಸಿಗೆ ಮಾರಾಟ ಮಾಡಲು ಜಾಹೀರಾತನ್ನು ಪೋಸ್ಟ್ ಮಾಡಿದ್ದಾರೆ.
ಎರಡೂ ಪ್ರಕರಣದಲ್ಲಿ ಅಪರಿಚಿತ ಆರೋಪಿಗಳು ಕ್ಯೂಆರ್ ಕೋಡ್ ಬಳಸಿ ಮಾರಾಟ ಮಾಡಲು ಬಯಸಿದ್ದವರ ಖಾತೆಯಿಂದಲೇ ಕ್ರಮವಾಗಿ 60 ಸಾವಿರ ಮತ್ತು 46,900 ರೂ. ಎಗರಿಸಿದ್ದಾರೆ.
ಎರಡೂ ಪ್ರಕರಣಗಳು ತನಿಖೆಯಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಿಚಿತರು ಕಳುಹಿಸಿದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದರಿಂದ ಆಗಿರುವ ಅಪಾಯದ ಬಗ್ಗೆ ನಾವು ಜನರಿಗೆ ಶಿಕ್ಷಣ ನೀಡುತ್ತಿದ್ದೇವೆ. ಆದರೆ ಅನೇಕರು ಬಲಿಯಾಗುತ್ತಲೇ ಇರುತ್ತಾರೆ ಎಂದು ಅಧಿಕಾರಿ ಹೇಳಿದ್ದಾರೆ.