ಪುರಾಣ ಪ್ರಸಿದ್ಧ ಸ್ಥಳಗಳು ನೋಡೋಕೆ ಕಣ್ಣಿಗೆ ಪರಮಾನಂದ ನೀಡೋದ್ರ ಜೊತೆ ಜೊತೆಗೆ ತಮ್ಮದೇ ಆದ ವಿಶೇಷ ಕತೆಗಳನ್ನೂ, ವಿಸ್ಮಯಗಳನ್ನೂ ಹೊಂದಿರುತ್ತವೆ. ಇದೇ ಸಾಲಿಗೆ ಸೇರುವ ಪ್ರೇಕ್ಷಣೀಯ ಸ್ಥಳ ಮೂಡುಬಿದಿರೆಯ ಸಾವಿರ ಕಂಬದ ಬಸದಿ.
ಈ ಸಾವಿರ ಕಂಬದ ಬಸದಿಗೆ ಚಂದ್ರನಾಥ ಬಸದಿ ಅಂತಾನೂ ಕರೀತಾರೆ. ಈ ಸ್ಥಳದಲ್ಲಿ ನಿಮಗೆ ಸಾವಿರಾರು ಕಂಬಗಳು ಕಾಣಸಿಗುತ್ತವೆ. ಈ ಕಂಬಗಳ ಮೇಲಿರುವ ಕಲಾಕೃತಿಯನ್ನ ನೋಡೋದೇ ಚೆಂದ. ಅಂದಹಾಗೆ ಇದಕ್ಕೆ ಸಾವಿರ ಕಂಬದ ಬಸದಿ ಅಂತಾ ಕರೆಯೋಕೆ ಕಾರಣವೂ ಇದೆ. ಈ ಸ್ಥಳದಲ್ಲಿ ಸಾವಿರಕ್ಕೂ ಹೆಚ್ಚು ಕಂಬಗಳು ಇವೆಯಂತೆ. ಆದರೆ ಇದನ್ನ ನೀವು ಎಣಿಸೋ ಹಾಗಿಲ್ಲ. ಯಾಕಂದ್ರೆ ಕಂಬ ಲೆಕ್ಕ ಹಾಕಲು ಹೋದ್ರೆ ಮತ್ತೊಂದು ಕಂಬ ಹುಟ್ಟಿಕೊಳ್ಳುತ್ತೆ ಎಂಬ ನಂಬಿಕೆ ಇದೆ.
ಕರ್ನಾಟಕದಲ್ಲಿ ಒಟ್ಟು 8 ಜೈನ ಬಸದಿಗಳಿದ್ದು ಅದರಲ್ಲಿ ಚಂದ್ರನಾಥ್ ಬಸದಿ ಅತ್ಯಂತ ಮಹತ್ವದ್ದಾಗಿದೆ. ತ್ರಿಭುವನ ತಿಲಕ ಚೂಡಾಮಣಿಯ ಈ ಬಸದಿಯಲ್ಲಿ ವಿಶೇಷವಾದ ವಾಸ್ತು ಶಿಲ್ಪವಿದೆ. ಈ ಬಸದಿಯಲ್ಲಿ 18 ದೇವಸ್ಥಾನ, 18 ಬಸದಿ, 18 ಕೆರೆ ಹಾಗೂ 18 ರಸ್ತೆಗಳಿವೆ. 1430ರಲ್ಲಿ ನಿರ್ಮಾಣವಾದ ಕರಾವಳಿ ಭಾಗದ ಅತಿದೊಡ್ಡ ಬಸದಿಯನ್ನ 1962ರಲ್ಲಿ ದೇವರಾಯ ಒಡೆಯರು ಜೀರ್ಣೋದ್ದಾರ ಮಾಡಿದ್ದಾರೆ. ಬಸದಿಯ ಗರ್ಭಗುಡಿಯಲ್ಲಿ 8 ಅಡಿ ಎತ್ತರದ ಚಂದ್ರಪ್ರಭರ ವಿಗ್ರಹವಿದೆ. ಕಾರ್ಕಳದ ಭೈರವಿ ರಾಣಿ ನಾಗಳದೇವಿ ಬರೋಬ್ಬರಿ 60 ಅಡಿ ಎತ್ತರದ ಒಂಟಿ ಸ್ಥಂಭವನ್ನ ಸ್ಥಾಪನೆ ಮಾಡಿದ್ದಾಳೆ.
ಇನ್ನು ಇಲ್ಲಿರುವ ಕೀರ್ತಿಸ್ತಂಭವನ್ನ ರಾಣಾ ಕುಂಬ ಖಿಲ್ಜಿ ವಿರುದ್ಧದ ಜಯದ ಗುರುತಿಗಾಗಿ ಸ್ಥಾಪಿಸಿದ ಎಂದು ಹೇಳುವವರು ಒಂದೆಡೆಯಾದರೆ ಇನ್ನೊಂದಷ್ಟು ಮಂದಿ ಇದು 12ನೇ ಶತಮಾನದಲ್ಲಿ ವ್ಯಾಪಾರಿ ಸಹಾಜೀಯಾ ನಿರ್ಮಿಸಿದ ಸ್ತಂಭ ಎಂದೂ ಹೇಳ್ತಾರೆ.
ಮಂಗಳೂರಿನಿಂದ ಕೇವಲ 33 ಕಿಲೋಮೀಟರ್ ದೂರದಲ್ಲಿರುವ ಮೂಡಬಿದಿರೆಗೆ ಹೋಗಲು ನಿಮಗೆ ಹಲವಾರು ಬಸ್ಗಳಿವೆ. ಹೀಗಾಗಿ ಈ ಬಸದಿಯನ್ನ ತಲುಪೋದು ನಿಮಗೆ ಕಷ್ಟದ ಕೆಲಸವಂತೂ ಅಲ್ಲವೇ ಅಲ್ಲ.