ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಲೇ ಇರೋದ್ರ ಹಿನ್ನೆಲೆ ಮೇ 24ರಿಂದ ಆರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನ ರಾಜ್ಯ ಸರ್ಕಾರ ಮುಂದೂಡಿದೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನ ಪ್ರಕಟಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ರು.
ವಿಧಾನಸೌಧದಲ್ಲಿ ಈ ಸಂಬಂಧ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಸುರೇಶ್ ಕುಮಾರ್ ಬಳಿಕ ಈ ಮಾಹಿತಿಯನ್ನ ನೀಡಿದ್ದಾರೆ. ಅಲ್ಲದೇ ಪರಿಷ್ಕೃತ ದಿನಾಂಕವನ್ನ 15-20 ದಿನಗಳ ಮುಂಚಿತವಾಗಿಯೇ ಪ್ರಕಟಿಸಲಾಗುವುದು. ಹೀಗಾಗಿ ಪರೀಕ್ಷೆ ತಯಾರಿಯಲ್ಲಿರುವ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಇನ್ನು ಪ್ರಥಮ ಪಿಯುಸಿ ಪರೀಕ್ಷೆಯನ್ನೂ ಸರ್ಕಾರವು ರದ್ದು ಮಾಡಿದ್ದು ಪರೀಕ್ಷೆ ಇಲ್ಲದೆಯೇ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಗೆ ತೇರ್ಗಡೆ ಹೊಂದಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಸುರೇಶ್ ಕುಮಾರ್ ಹೇಳಿದ್ರು.
ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭಕ್ಕೂ ಮುನ್ನ ಬ್ರಿಡ್ಜ್ ಕೋರ್ಸ್ಗಳು ನಡೆಯಲಿದೆ. ಇಲಾಖೆಯ ಯುಟ್ಯೂಬ್ ಚಾನೆಲ್ ಮೂಲಕ ಈಗಿನಿಂದಲೇ ಬ್ರಿಡ್ಜ್ ಕೋರ್ಸ್ಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದ್ರು.
ಇನ್ನು ಉಪನ್ಯಾಸಕರಿಗೆ ವರ್ಕ್ ಫ್ರಮ್ ಹೋಮ್ಗೆ ಸೂಚಿಸಲಾಗಿದ್ದು ವಿದ್ಯಾರ್ಥಿಗಳು ಹಾಗೂ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವಂತೆ ಸೂಚಿಸಲಾಗಿದೆ.