ಕಳೆದು ಹೋದ ತಾಯಿಯನ್ನು ಮೂರು ವರ್ಷದಿಂದ ಹುಡುಕುತ್ತಿದ್ದ ಮಗನೊಬ್ಬ ಕೊನೆಗೂ ತನ್ನ ತಾಯಿಯನ್ನು ಸೇರುವಲ್ಲಿ ಯಶಸ್ವಿಯಾಗಿದ್ದಾನೆ. ಈ ಘಟನೆ ನಡೆದಿರೋದು ಮಡಿಕೇರಿಯಲ್ಲಿ. ತನ್ನ ತಾಯಿಗಾಗಿ ಹುಡುಕದ ಜಾಗವಿಲ್ಲ. ಪ್ರತಿ ನಿತ್ಯ ತನ್ನ ತಾಯಿ ಮನೆಗೆ ಬರಲಿ ಅಂತ ಎಲ್ಲಾ ದೇವರಿಗೆ ಹರಕೆ ಕಟ್ಟಿಕೊಂಡಿದ್ದಾತನ ಪ್ರಾರ್ಥನೆ ಕೊನೆಗೂ ಫಲಿಸಿದೆ.
ಹೌದು, ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನ ಸಾಲಿಗ್ರಾಮದ ಮಹೇಶ್ ಎಂಬವರೇ ತನ್ನ ತಾಯಿಗಾಗಿ ಹುಡುಕುತ್ತಿದ್ದ ಮಗ. ಮೂರು ವರ್ಷಗಳ ಹಿಂದೆ ಇವರ ತಾಯಿ ಪಾರ್ವತಿ ಕಳೆದುಹೋಗಿದ್ದರು. ಮಾನಸಿಕ ಅಸ್ವಸ್ಥರಾಗಿದ್ದ ಇವರು ಎಲ್ಲಿ ಹೋದರೂ ಎಂಬುದೇ ತಿಳಿದಿರಲಿಲ್ಲ. ಹೀಗಾಗಿ ಎಲ್ಲಾ ಕಡೆಗಳಲ್ಲಿ ಹುಡುಕಿದ್ದ ಮಹೇಶ್. ಆದರೆ ಏನೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಆ ದೇವರೇ ಈ ತಾಯಿ ಮಗನನ್ನು ಒಂದು ಮಾಡಿದ್ದಾನೆ.
ಕಾಣೆಯಾಗಿದ್ದ ಪಾರ್ವತಿ ಅಲ್ಲಿ ಇಲ್ಲಿ ಓಡಾಡುತ್ತಿದ್ದರಂತೆ. ಇದನ್ನು ನೋಡಿದ ಮಡಿಕೇರಿ ಪೊಲೀಸರು ಆಕೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ. ಅಲ್ಲಿಂದ ಪಾರ್ವತಿಯನ್ನು ಈ ಸಂಸ್ಥೆಯೇ ನೋಡಿಕೊಳ್ಳುತ್ತಿತ್ತು. ಇನ್ನು ಈಕೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲವಾದ್ದರಿಂದ ಈಕೆಯ ಹೆಸರೂ ಅವರಿಗೆ ತಿಳಿದಿಲ್ಲ. ಹೀಗಾಗಿ ಜಲಜಾ ಎಂಬ ಹೆಸರಿನಿಂದ ಈಕೆಯನ್ನು ಕರೆದಿದ್ದರು. ಕಾಲ ಕಳೆದಂತೆ ಈಕೆಯ ವಿಳಾಸ ಪತ್ತೆ ಮಾಡಿದೆ ಸಂಸ್ಥೆ. ನಂತರ ಮಹೇಶ್‌ಗೆ ಕರೆ ಮಾಡಿ ತಾಯಿ ಇಲ್ಲಿ ಇರುವ ಬಗ್ಗೆ ಹೇಳಿದ್ದಾರೆ. ತನ್ನ ತಾಯಿ ಬದುಕೇ ಇಲ್ಲ ಎಂದುಕೊಂಡವನಿಗೆ ತಾಯಿ ಬದುಕಿರುವ ಸುದ್ದಿ ಕೇಳಿ ನಿಜಕ್ಕೂ ಆಶ್ಚರ್ಯದ ಜೊತೆಗೆ ಖುಷಿಯೂ ಆಗಿದೆ. ನಂತರ ತನ್ನೂರಿನಿಂದ ಮಡಿಕೇರಿಗೆ ಬಂದ ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ.