ಬೆಂಗಳೂರು: ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು ಸದ್ಯಕ್ಕಂತೂ ಶಾಲೆ ಪುನಾರಂಭವಾಗುವುದಿಲ್ಲ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್, ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಶಾಲೆಗಳನ್ನು ಆರಂಭಿಸುವ ಅವಸರ ಸರ್ಕಾರದ ಮುಂದೆ ಇಲ್ಲವೆಂದು ಹೇಳಿದ್ದಾರೆ.
ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ತಂತ್ರಜ್ಞಾನ ಆಧಾರಿತ ಶಿಕ್ಷಣ ಮತ್ತು ಶಾಲಾ ಚಟುವಟಿಕೆ ಕುರಿತು ಸಭೆ ನಡೆಸಿದ ಅವರು, ಶಾಲೆ ಸದ್ಯಕ್ಕೆ ಆರಂಭವಾಗುವುದಿಲ್ಲ. ಆದರೆ ಶಾಲೆಗಳನ್ನು ಆರಂಭಿಸದಿದ್ದರೂ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಎಲ್ಲ ಆಯಾಮಗಳಿಂದ ಪ್ರಯತ್ನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಪಡಸಾಲೆ ಶಾಲೆ, ಮನೆಶಾಲೆ, ವಠಾರ ಶಾಲೆ, ತಂತ್ರಜ್ಞಾನ ಆಧಾರಿತ ಶಿಕ್ಷಣ, ಚಂದನ ದೂರದರ್ಶನ ವಾಹಿನಿ, ಖಾಸಗಿ ವಾಹಿನಿ, ಆಕಾಶವಾಣಿ, ಶಿಕ್ಷಣ ಇಲಾಖೆಯ ಸೌಲಭ್ಯಗಳ ಮೂಲಕ ಎಲ್ಲಾ ಅವಕಾಶ ಬಳಸಿಕೊಂಡು ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.