ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು ಶಾಲಾ – ಕಾಲೇಜು ಆರಂಭ ಕುರಿತಂತೆ ಚರ್ಚೆ ನಡೆದಿರುವ ಹೊತ್ತಲ್ಲೇ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಾಲೆ ಆರಂಭಕ್ಕೆ ಸಲಹೆ ನೀಡಿದೆ.
ಮಕ್ಕಳಿಗೆ ರೋಗನಿರೋಧಕ ಶಕ್ತಿ ಇದೆ. ಶಾಲೆ ನಡೆಸದಿದ್ದರೆ ಅಪಾಯ ಎಂದು ಹೇಳಲಾಗಿದೆ. ಎಲ್ಲಾ ಕೊಠಡಿ, ಪೀಠೋಪಕರಣ, ಶೌಚಾಲಯ, ನೀರಿನ ತೊಟ್ಟಿ ಸ್ವಚ್ಛಗೊಳಿಸಿ ಕೈತೊಳೆಯಲು ಅಗತ್ಯ ಸಾಬೂನು ನೀರಿನ ವ್ಯವಸ್ಥೆ ಕಲ್ಪಿಸಬೇಕು. ಮಕ್ಕಳಿಗೆ ಗುಣಮಟ್ಟದ ಮಾಸ್ಕ್ ಒದಗಿಸಬೇಕು. ಆರೋಗ್ಯ ತಪಾಸಣೆ ನಡೆಸಬೇಕು. ಉತ್ತಮ ಆಹಾರ ಕೊಡಬೇಕು ಎಂದು ಶಿಫಾರಸು ಮಾಡಲಾಗಿದೆ.
ವಯಸ್ಸಾದವರಿಗೆ, ಬೇರೆ ಕಾಯಿಲೆ ಇರುವ ವ್ಯಕ್ತಿಗಳಿಗೆ ಹೋಲಿಸಿದಾಗ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಪೋಷಕರಿಗೆ ಜಾಗೃತಿ ಮೂಡಿಸಿ ಶಾಲೆಗಳನ್ನು ಆರಂಭಿಸಬೇಕು ಎಂದು ಸಲಹೆ ನೀಡಲಾಗಿದೆ.
ಶಾಲೆಗೆ ಹೋಗದಿದ್ದರೆ ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಮಕ್ಕಳ ಸಾಗಣೆಯಂತಹ ಕೃತ್ಯಗಳು ನಡೆಯುವ ಸಾಧ್ಯತೆ ಇದೆ. ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ. ಆಂಟನಿ ಸೆಬಾಸ್ಟಿಯನ್ ಅವರು ಶಿಕ್ಷಣ ಇಲಾಖೆಗೆ ಸಲಹೆ ನೀಡಿದ್ದಾರೆ.
2020 -21 ರ ಶೈಕ್ಷಣಿಕ ವರ್ಷವನ್ನು ಪರೀಕ್ಷೆ ರಹಿತ ಕಲಿಕಾ ವರ್ಷವೆಂದು ಘೋಷಿಸಬೇಕು. ಪಾಳಿ ಪದ್ಧತಿಯಲ್ಲಿ ಶಾಲೆಗಳನ್ನು ಆರಂಭಿಸಬೇಕು. ಶಾಲೆ ಆರಂಭವಾದ ನಂತರ ಮಾರ್ಗಸೂಚಿ ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಲಾಗಿದೆ.