ಬೆಂಗಳೂರು: ನವೆಂಬರ್ ನಿಂದ ಶಾಲೆ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಶೇಕಡ 30 ರಷ್ಟು ಪಠ್ಯ ಕಡಿತ ಮಾಡಲಾಗಿದೆ. 120 ದಿನಕ್ಕೆ ಸೀಮಿತಗೊಳಿಸಿ ಪಠ್ಯಕ್ರಮ ಜಾರಿ ಮಾಡಲಾಗಿದೆ.
1 ರಿಂದ 10ನೇ ತರಗತಿವರೆಗಿನ ಶೇಕಡ 30ರಷ್ಟು ಪಠ್ಯಗಳನ್ನು ಕಡಿತ ಮಾಡಲಾಗಿದ್ದು ಕೊರೋನಾ ಪರಿಸ್ಥಿತಿ ಸುಧಾರಿಸಿದಲ್ಲಿ ನವೆಂಬರ್ ನಿಂದ ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಆನ್ಲೈನ್ ಪಾಠದ ಸೌಲಭ್ಯ ಇಲ್ಲದವರಿಗೆ ವಾರಕ್ಕೆ ಒಮ್ಮೆ ನೇರ ಪಾಠ ನಡೆಸುವ ಕುರಿತು ಚಿಂತನೆ ನಡೆಸಲಾಗಿದೆ.
ಸದ್ಯಕ್ಕೆ ಶಾಲೆಗಳು ಆರಂಭವಾಗುವ ಸಾಧ್ಯತೆ ಇಲ್ಲದ ಕಾರಣ ಚಂದನವಾಹಿನಿಯಲ್ಲಿ ಪಾಠ ಮಾಡಲಾಗುತ್ತಿದೆ. ಶಿಕ್ಷಣ ತಜ್ಞರ ಸಲಹೆ, ವರದಿ ಆಧರಿಸಿ ವಿದ್ಯಾಗಮ ಎಂಬ ಯೋಜನೆಯನ್ನು ಜಾರಿಗೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ.
1 ರಿಂದ 5, 6 ರಿಂದ 8 ಮತ್ತು 9 ರಿಂದ 10ನೇ ತರಗತಿ ಮಕ್ಕಳನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಕನಿಷ್ಠ 20 ರಿಂದ 25 ವಿದ್ಯಾರ್ಥಿಗಳಿಗೆ ಒಬ್ಬರಂತೆ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಲಾಗುವುದು. ಫೋನ್, ಲ್ಯಾಪ್ಟಾಪ್, ಕಂಪ್ಯೂಟರ್ ಇಂಟರ್ನೆಟ್ ಸೌಲಭ್ಯ ಇದ್ದವರಿಗೆ ಆನ್ಲೈನ್ ಕ್ಲಾಸ್, ಮೊಬೈಲ್ ಇದ್ದರೂ ಇಂಟರ್ನೆಟ್ ಸೌಲಭ್ಯ ಇಲ್ಲದ ಮಕ್ಕಳಿಗೆ ಎಸ್ಎಂಎಸ್ ಅಥವಾ ಕರೆ ಮಾಡಿ ಕಲಿಕೆ ಮಾಹಿತಿ ನೀಡಲಾಗುವುದು.
ಫೋನ್, ಲ್ಯಾಪ್ಟಾಪ್, ಇಂಟರ್ನೆಟ್ ಯಾವುದೇ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳಿಗೆ ಪ್ರತಿವಾರ ಅವರು ಇರುವ ಸ್ಥಳಕ್ಕೆ ಮಾರ್ಗದರ್ಶಿ ಶಿಕ್ಷಕರು ಭೇಟಿ ನೀಡಿ ಪಾಠ-ಪ್ರವಚನ ನಡೆಸಲಿದ್ದಾರೆ ಎಂದು ಹೇಳಲಾಗಿದೆ.