
ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಶಾಲೆಗಳು ಆರಂಭವಾಗಿಲ್ಲ. ಜೂನ್ ತಿಂಗಳಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಬೇಕಿತ್ತಾದರೂ ಶೈಕ್ಷಣಿಕ ಅವಧಿ ವಿಳಂಬವಾಗುತ್ತಿದೆ.
ಶಾಲೆಗಳನ್ನು ಯಾವಾಗ ಆರಂಭಿಸಬೇಕೆಂಬ ಚರ್ಚೆ ನಡೆದಿದೆ. ಆದರೆ, ಕೊರೋನಾ ಕಾರಣದಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡ ತಿಂಗಳಾಂತ್ಯದವರೆಗೆ ಶಾಲೆಗಳನ್ನು ಆರಂಭಿಸದಿರಲು ಮಾರ್ಗಸೂಚಿ ಹೊರಡಿಸಿದೆ.
ಶಾಲೆಗಳನ್ನು ಯಾವಾಗ ಆರಂಭಿಸಬೇಕೆಂದು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದ ಬಳಿಕ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಅಕ್ಟೋಬರ್ ವರೆಗೂ ಶಾಲೆ ಆರಂಭವಾಗುವ ಸಾಧ್ಯತೆ ಇಲ್ಲ.
ಶಾಲೆಗಳಲ್ಲಿ ದಾಖಲಾತಿ ಮಾಡಿಕೊಳ್ಳಲು ಸರ್ಕಾರ ಸೂಚನೆ ನೀಡಿದೆ. 9 ರಿಂದ 12 ನೇ ತರಗತಿ ಮಕ್ಕಳು ಶಾಲೆಗೆ ಭೇಟಿ ನೀಡಿ ಶಿಕ್ಷಕರ ಮಾರ್ಗದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹೀಗಿರುವುದರಿಂದ ಅಕ್ಟೋಬರ್ 1 ರ ನಂತರ ಶಾಲೆಗಳು ಆರಂಭವಾಗಬಹುದೇ ಎಂಬ ಚರ್ಚೆ ನಡೆದಿದೆ. ಆದರೆ, ಕೇಂದ್ರ ಸರ್ಕಾರದ ಮಾರ್ಗಸೂಚಿ ಆಧಾರದಲ್ಲಿ ರಾಜ್ಯ ಸರ್ಕಾರ ಶಾಲೆಗಳ ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.