ಕಲಬುರಗಿ: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಇದೇ ಹೊತ್ತಲ್ಲಿ ಶಾಲಾ – ಕಾಲೇಜು ಆರಂಭ ಕುರಿತಂತೆ ಚರ್ಚೆ ನಡೆದಿದೆ.
ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರ ಸದ್ಯಕ್ಕೆ ಶಾಲೆಗಳನ್ನು ಆರಂಭಿಸದಿರಲು ತೀರ್ಮಾನಿಸಿದೆ. ಮಕ್ಕಳ ಕಲಿಕೆಗೆ ಪೂರಕವಾಗಿ ವಿದ್ಯಾಗಮ ಯೋಜನೆಯಡಿ ಶಾಲೆಗಳಲ್ಲಿ ಮಾಡುತ್ತಿದ್ದ ಪಾಠವನ್ನು ವಠಾರ ಶಾಲೆಗಳಲ್ಲಿ ನಡೆಸಲಾಗುತ್ತಿದೆ.
ಆದರೆ, ಕಲಬುರಗಿ ಜಿಲ್ಲೆ ಅಫ್ಜಲಪುರ ತಾಲ್ಲೂಕಿನ ಮಾಶಾಳದಲ್ಲಿ 4 ಶಾಲಾ ಮಕ್ಕಳಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು ಶಾಲೆ ಸೀಲ್ ಡೌನ್ ಮಾಡಲಾಗಿದೆ. ಶಾಲಾ-ಕಾಲೇಜು ಪುನರಾರಂಭಿಸುವ ಕುರಿತಂತೆ ಚರ್ಚಿಸುತ್ತಿರುವ ಸರ್ಕಾರಕ್ಕೆ, ಪೋಷಕರಿಗೆ ಶಾಕ್ ನೀಡಿದೆ.
20 ದಿನಗಳ ಹಿಂದೆ ಶಾಲೆಯ ಶಿಕ್ಷಕರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಶಾಲಾ ಮಕ್ಕಳು ಮತ್ತು ಶಿಕ್ಷಕರ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು ನಾಲ್ವರು ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ ಎಂದು ಹೇಳಲಾಗಿದೆ.