ಬಿಜೆಪಿ ಸರ್ಕಾರ ಪತನವಾದರೂ ನಾವು ಸರ್ಕಾರ ರಚಿಸುವ ಪ್ರಶ್ನೆ ಇಲ್ಲ. ನಾವು ಚುನಾವಣೆಗೆ ಹೋಗುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬಿಜೆಪಿಯಿಂದ ಲೀಗಲ್ ನೋಟಿಸ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಯಾವ ಆಧಾರದ ಮೇಲೆ ನೋಟಿಸ್ ಕೊಡುತ್ತಾರೆ ಎನ್ನುವುದು ಗೊತ್ತಿಲ್ಲ. ಪ್ರತಿನಿತ್ಯ ಆರೋಪ – ಪ್ರತ್ಯಾರೋಪ ಮಾಡುತ್ತಲೇ ಇರುತ್ತೇವೆ. ಪ್ರತಿಪಕ್ಷವಾಗಿ ನಮಗೆ ಎಲ್ಲ ರೀತಿಯ ಅವಕಾಶವಿದೆ. ನಾವು ಅಧಿವೇಶನದಲ್ಲಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಅಧಿವೇಶನದಲ್ಲಿ ಪ್ರಸ್ತಾಪಿಸುವ ಜೊತೆಗೆ ಕಾನೂನು ಹೋರಾಟವನ್ನು ಕೂಡ ಮಾಡುವುದಾಗಿ ಅವರು ತಿಳಿಸಿದ್ದು, ಪ್ರತಿದಿನ ಸಾವಿರಾರು ಜನ ಆರೋಪ ಮಾಡುತ್ತಾರೆ. ಎಲ್ಲರಿಗೂ ನೋಟಿಸ್ ಕೊಡೋಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, ಸಿಎಂ ಯಡಿಯೂರಪ್ಪ ಅವರನ್ನು ಮುಂದುವರೆಸುವುದು ಇಳಿಸುವುದು ಅವರಿಗೆ ಬಿಟ್ಟ ವಿಚಾರವಾಗಿದೆ. ಯಡಿಯೂರಪ್ಪನವರನ್ನು ಮುಂದುವರೆಸಿದರು ನಮಗೆ ಲಾಭ, ಕೆಳಗಿಳಿಸಿದರೂ ನಮಗೆ ಲಾಭ. ಬಿಜೆಪಿ ಸರ್ಕಾರ ಇರುವಷ್ಟು ದಿನ ನಮಗೆ ಲಾಭ ಎಂದು ಹೇಳಿದ್ದಾರೆ.
ಆರು ತಿಂಗಳು ಮಾತ್ರ ಯಡಿಯೂರಪ್ಪನವರಿಗೆ ಅಧಿಕಾರ ಎಂದು ಅವರ ಪಕ್ಷದ ಕೆಲವರು ಹೇಳುತ್ತಿದ್ದರು. ಅದು ಏನೇ ಇದ್ದರೂ ಅವರ ಪಕ್ಷದ ವಿಚಾರವಾಗಿದೆ. ಲಕ್ಷ್ಮಣ ಸವದಿ ಅವರನ್ನು ಮುಖ್ಯಮಂತ್ರಿ ಮಾಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪನವರಿಗೆ ಕೌಂಟರ್ ಕೊಡಲು ಕೆಲವರನ್ನು ಮಂತ್ರಿ ಮಾಡಲಾಗಿದೆ. ಇದನ್ನು ಅವರು ಹೇಗೆ ನಿಭಾಯಿಸುತ್ತಾರೆಯೋ? ಈ ಗೋಲನ್ನು ಹೇಗೆ ಹೊಡೆಯುತ್ತಾರೆ ಎನ್ನುವುದನ್ನು ನೋಡಬೇಕು. ಅವರ ಸರ್ಕಾರ ಬಿದ್ದರೂ ನಾವು ಸರ್ಕಾರ ರಚಿಸುವ ಪ್ರಶ್ನೆ ಇಲ್ಲ. ನಾವು ಚುನಾವಣೆಗೆ ಹೋಗುತ್ತೇವೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.