ಗದಗ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ರಾಜ್ಯಸ್ವ ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕೆಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ತಿಳಿಸಿದ್ದಾರೆ.
ನರಗುಂದ ಗೃಹ ಕಚೇರಿಯಿಂದ ಜರುಗಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆಯಲ್ಲಿ ಸಚಿವರು ಮಾತನಾಡಿದರು. ಇಲಾಖೆಯಿಂದ ಜನ ಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಸೂಚಿಸಿದ್ದಾರೆ.
ನೂತನ ಮರಳು ನೀತಿ ಜಾರಿಗೆ ತರುವ ಕುರಿತು ಅಗತ್ಯದ ಸಿದ್ಧತೆಗಳನ್ನು ಮಾಡಿಕೊಳ್ಳುವ ಜೊತೆಗೆ ಖನಿಜ ರಕ್ಷಣಾ ಪಡೆ ರಚಿಸಲು ಅಗತ್ಯದ ಕ್ರಮ ಜರುಗಿಸಬೇಕು. ಅಂತರಾಜ್ಯಗಳಿಂದ ಬರುವ ಉಪ ಖನಿಜಕ್ಕೆ ನಿಯಂತ್ರಣ ಶುಲ್ಕ ಸಂಗ್ರಹಿಸಲು ಸ್ಥಾಪಿಸಲಾದ ಚೆಕ್ ಪೋಸ್ಟಗಳನ್ನು ಬಲಪಡಿಸಿ ಕಟ್ಟುನಿಟ್ಟಾಗಿ ವಾಹನಗಳ ತಪಾಸಣೆ ಕೈಗೊಳ್ಳಲು ತಿಳಿಸಿದ್ದಾರೆ.
ಕಾರ್ಯಾನುಮತಿ ಪಡೆದು ಪಟ್ಟಾ ಜಮೀನಿನಲ್ಲಿ ಗ್ರಾನೈಟ್ ಗಣಿಗಾರಿಕೆ ನಡೆಸುತ್ತಿರುವವರು ಕಡ್ಡಾಯವಾಗಿ ಲೈಸನ್ಸ್ ಪಡೆದು ಸರ್ಕಾರಕ್ಕೆ ನಿಯಮಾನುಸಾರ ರಾಜಸ್ವ ಪಾವತಿಸಲು ಸ್ಥಳೀಯ ಅಧಿಕಾರಿಗಳು ನಿಗಾವಹಿಸುವಂತೆ ಸೂಚಿಸಲು ಹೇಳಿದ್ದಾರೆ.