ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಶುಶ್ರೂಷಕರು, ಲ್ಯಾಬ್ ಟೆಕ್ನಿಷಿಯನ್, ಫಾರ್ಮಾಸಿಸ್ಟ್ ಮತ್ತು ಗ್ರೂಪ್-ಡಿ ಹುದ್ದೆಗಳಿಗೆ ಅರೆಕಾಲಿಕ ಆಧಾರದ ಮೇಲೆ ನೇಮಿಸಿಕೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಖಾಲಿ ಹುದ್ದೆಗಳ ನೇಮಕಾತಿಗೆ ಕ್ರಮಕೈಗೊಂಡಿದ್ದು, 1419 ಶುಶ್ರೂಷಕರು, 506 ಲ್ಯಾಬ್ ಟೆಕ್ನಿಷಿಯನ್, 916 ಫಾರ್ಮಾಸಿಸ್ಟ್, ಗ್ರೂಪ್-ಡಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು.
ತಾತ್ಕಾಲಿಕವಾಗಿ 6 ತಿಂಗಳ ಅವಧಿಗೆ ಅಥವಾ ನೇರ ನೇಮಕಾತಿಯ ಹುದ್ದೆಗಳು ಭರ್ತಿಯಾಗುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಈ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಅನುಮತಿ ನೀಡಿದೆ. ಗ್ರೂಪ್ ಡಿ ನೌಕರರಿಗೆ ಚಾಲ್ತಿಯಲ್ಲಿರುವ ವೇತನದ ಆಧಾರದ ಮೇಲೆ ವೇತನ ನೀಡಲಾಗುವುದು. ಲ್ಯಾಬ್ ಟೆಕ್ನಿಷಿಯನ್, ಫಾರ್ಮಾಸಿಸ್ಟ್ ಗಳಿಗೆ 20 ಸಾವಿರ ರೂ., ಶುಶ್ರೂಷಕರಿಗೆ 25 ಸಾವಿರ ರೂಪಾಯಿ ವೇತನ ನೀಡಲಾಗುವುದು ಎಂದು ಹೇಳಲಾಗಿದೆ.