ಬೆಂಗಳೂರು: ಗ್ರಾಮೀಣ ಪ್ರದೇಶದ ಜನರಿಗೆ ಆಸ್ತಿಹಕ್ಕು ಕಾರ್ಡ್ ವಿತರಿಸುವ ಸ್ವಾಮಿತ್ವ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ಚಾಲನೆ ನೀಡಿದ್ದಾರೆ.
ಯೋಜನೆಯಡಿ ಮೊದಲ ಹಂತದಲ್ಲಿ ರಾಜ್ಯದ 16 ಜಿಲ್ಲೆಗಳಲ್ಲಿ 16,600 ಗ್ರಾಮಗಳಲ್ಲಿ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮಠಾಣಾ ಪ್ರದೇಶದ ಆಸ್ತಿಗಳಿಗೆ ನಿಖರವಾದ ಹಕ್ಕು ದಾಖಲೆ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ಇದರಿಂದ ಗ್ರಾಮೀಣ ಜನರಿಗೆ ಅನುಕೂಲವಾಗುತ್ತದೆ.
ಈಗಾಗಲೇ ಪ್ರಾಯೋಗಿಕವಾಗಿ ರಾಜ್ಯದ 83 ಗ್ರಾಮಗಳಲ್ಲಿ ಕಾರ್ಡ್ ವಿತರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಮೊದಲ ಹಂತದಲ್ಲಿ 16 ಜಿಲ್ಲೆಗಳಲ್ಲಿ ಕಾರ್ಡ್ ವಿತರಿಸಲಿದ್ದು ಉಳಿದ 14 ಜಿಲ್ಲೆಗಳಲ್ಲಿ 2021ರ ಏಪ್ರಿಲ್ ನಲ್ಲಿ ಕಾರ್ಡ್ ವಿತರಣೆ ಆರಂಭವಾಗಲಿದೆ. ಸ್ವಾಮಿತ್ವ ಯೋಜನೆಯಿಂದ ಹಲವು ಪ್ರಯೋಜನ ಸಿಗಲಿದೆ. ಇನ್ನು ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಅನುಕೂಲವಾಗಲಿದೆ. ಸಂಪನ್ಮೂಲ ಸಂಗ್ರಹ ಕೂಡ ಹೆಚ್ಚಾಗಲಿದ್ದು ಸ್ಥಳೀಯ ಮೂಲಸೌಕರ್ಯವನ್ನು ಸಮರ್ಪಕವಾಗಿ ಒದಗಿಸಲು ಸಹಾಯವಾಗುತ್ತದೆ ಗ್ರಾಮಪಂಚಾಯಿತಿಗಳ ಸಬಲೀಕರಣ ಆಗುತ್ತದೆ ಎಂದು ಹೇಳಲಾಗಿದೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ -3 ಅಡಿ ರಾಜ್ಯಕ್ಕೆ ಒಟ್ಟು 5,612.50 ಕಿಮೀ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಮುಖ್ಯ ರಸ್ತೆ, ಸಂಪರ್ಕ ರಸ್ತೆಗಳ ಅಭಿವೃದ್ಧಿಪಡಿಸಲಿದ್ದು, ಕೇಂದ್ರ ಸರ್ಕಾರದಿಂದ ಶೇಕಡ 60 ರಷ್ಟು, ರಾಜ್ಯ ಸರ್ಕಾರದಿಂದ ಶೇಕಡ 40 ರಷ್ಟು ಹಣ ನೀಡಬೇಕಿದೆ ಎಂದು ಸಚಿವ ಈಶ್ವರಪ್ಪ ಮಾಹಿತಿ ನೀಡಿದ್ದಾರೆ.