ಬೆಂಗಳೂರು: 2020 -21 ನೇ ಸಾಲಿನ ಶಿಕ್ಷಣ ಹಕ್ಕು ಕಾಯ್ದೆ(ಆರ್.ಟಿ.ಇ.) ಪ್ರವೇಶ ಪ್ರಕ್ರಿಯೆಗೆ ಶಿಕ್ಷಣ ಇಲಾಖೆ ಚಾಲನೆ ನೀಡಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಆರ್.ಟಿ.ಇ. ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು ನೆರೆಹೊರೆ ಶಾಲೆಗಳ ಅಂತಿಮ ಪಟ್ಟಿ ಮತ್ತು ಒಂದನೇ ತರಗತಿ ಅನುದಾನ ರಹಿತ ಶಾಲೆಗಳಲ್ಲಿ ಲಭ್ಯವಿರುವ ಶೇಕಡ 25ರಷ್ಟು ಸೀಟುಗಳ ವಿವರವನ್ನು http://www.schooleducation.kar.nic.in ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಜೂನ್ 8 ರಿಂದ 9 ರವರೆಗೆ ಪ್ರಯೋಗಾರ್ಥವಾಗಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ್ದು ಜೂನ್ 10 ರಿಂದ 24ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದು. ಜೂನ್ 11 ರಿಂದ 29ರವರೆಗೆ ಅರ್ಜಿಗಳ ಪರಿಶೀಲನೆ ನಡೆಯಲಿದೆ. ಲಾಟರಿ ಪ್ರಕ್ರಿಯೆಗೆ ಅರ್ಹವಾದ ಮಕ್ಕಳ ಪಟ್ಟಿಯನ್ನು ಜುಲೈ 3 ರಂದು ಪ್ರಕಟಿಸಲಾಗುವುದು. ಮೊದಲ ಹಂತದ ಸುತ್ತಿನ ಸೀಟು ಹಂಚಿಕೆ ಜುಲೈ 13 ರಂದು ಪ್ರಕಟವಾಗಲಿದ್ದು ಜುಲೈ 14 ರಿಂದ 21ರವರೆಗೆ ದಾಖಲಾತಿ ಪ್ರಕ್ರಿಯೆ ನಡೆಯಲಿದೆ. ಅದೇ ರೀತಿ ಜುಲೈ 28ಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆ ಆರಂಭಿಸಲಾಗುವುದು ಎಂದು ಹೇಳಲಾಗಿದೆ.