ನವದೆಹಲಿ: ಆರ್.ಆರ್. ನಗರ ಶಿರಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳು ಪ್ರಚಾರ ಕೈಗೊಂಡಿದ್ದರೆ, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಸ್ಪೆನ್ಸ್ ನಲ್ಲಿ ಇಡಲಾಗಿದೆ. ಬಿಜೆಪಿ ಹೈಕಮಾಂಡ್ ಗೂ ಅಭ್ಯರ್ಥಿಗಳ ಆಯ್ಕೆ ವಿಚಾರ ತಲೆನೋವಾಗಿ ಪರಿಣಮಿಸಿದೆ.
ಗುಜರಾತ್, ಓಡಿಶಾ, ಮಣಿಪುರ ರಾಜ್ಯಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಬಿಜೆಪಿ ವರಿಷ್ಠರು, ರಾಜರಾಜೇಶ್ವರಿ ನಗರ, ಶಿರಾ ಕ್ಷೇತ್ರಗಳ ಅಭ್ಯರ್ಥಿಗಳ ವಿಚಾರದಲ್ಲಿ ತೀರ್ಮಾನ ಕೈಗೊಂಡಿಲ್ಲ. ಆರ್.ಆರ್. ನಗರದಲ್ಲಿ ಮುನಿರತ್ನ ಮತ್ತು ತುಳಸಿ ಮುನಿರಾಜು ಗೌಡ ಅವರ ನಡುವೆ ಪೈಪೋಟಿ ಇರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿಲ್ಲ. ಶಿರಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಾಗಿ ಎಸ್.ಆರ್. ಗೌಡ, ಮಂಜುನಾಥ್ ಮತ್ತು ರಾಜೇಶ್ ಗೌಡ ನಡುವೆ ಪೈಪೋಟಿ ಇದೆ.
ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೊಂದಲ ಮೂಡಿದ ಈ ಹಿನ್ನೆಲೆಯಲ್ಲಿ ಇವತ್ತು ಕೂಡ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವುದು ಡೌಟು ಎಂದು ಹೇಳಲಾಗುತ್ತಿದೆ. ಗುಜರಾತ್, ಓಡಿಶಾ, ಮಣಿಪುರ ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಕರ್ನಾಟಕದ 2 ಕ್ಷೇತ್ರಗಳಿಗೆ ಮಾತ್ರ ಸಸ್ಪೆನ್ಸ್ ನಲ್ಲಿಡಲಾಗಿದೆ ಎಂದು ಹೇಳಲಾಗಿದೆ.