ಬೆಂಗಳೂರು: ಉಂಗುರ ನುಂಗಿದ ಮಗುವಿಗೆ ಯಶಸ್ವಿ ಚಿಕಿತ್ಸೆ ನೀಡಿದ ವೈದ್ಯರು ಮಗುವನ್ನು ರಕ್ಷಿಸಿದ್ದಾರೆ. ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಉಂಗುರ ನುಂಗಿದ್ದು, ಅದು ಗಂಟಲಲ್ಲಿ ಸಿಲುಕಿದೆ.
ಪೋಷಕರು ಉಂಗುರವನ್ನು ಹೊರತೆಗೆಯಲು ಮಾಡಿದ ಪ್ರಯತ್ನ ವಿಫಲವಾಗಿ ಉಸಿರಾಟದ ಸಮಸ್ಯೆಗೆ ಕಾಣಿಸಿಕೊಂಡಿದೆ. ಕೂಡಲೇ ವರ್ಷದ ಮಗುವನ್ನು ಕರೆದುಕೊಂಡು ಬನ್ನೇರುಘಟ್ಟ ರಸ್ತೆಯ ರೈನ್ ಬೋ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.
ಆಸ್ಪತ್ರೆಯ ವೈದ್ಯರು ಗಂಟಲಿನಿಂದ ಉಂಗುರ ಕೆಳಗೆ ಇಳಿಯದಂತೆ ತಡೆದು ಎಂಡೋಸ್ಕೋಪಿ ಮೂಲಕ ವಿಶುವಲೈಸೇಷನ್ ಸಹಾಯದಿಂದ ಉಂಗುರವನ್ನು ಹೊರತೆಗೆದಿದ್ದಾರೆ. ವೈದ್ಯರ ಯಶಸ್ವಿ ಪ್ರಯತ್ನದಿಂದ ಮಗು ಆರೋಗ್ಯವಾಗಿದ್ದು ಕೆಲವು ಗಂಟೆಗಳ ನಂತರ ಡಿಸ್ಚಾರ್ಜ್ ಮಾಡಲಾಗಿದೆ. ಆತಂಕದಲ್ಲಿದ್ದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.