ಶಿವಮೊಗ್ಗ: ನಗರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರಾಜ್ಯ ಸರ್ಕಾರದ ಪಡಿತರ ಧಾನ್ಯ ಹಂಚಿಕೆ ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಜೂನ್ -2020ರ ಮಾಹೆಗೆ ಬಿಡುಗಡೆಯಾದ ಪಡಿತರಧಾನ್ಯವನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಿ ಬಿಡುಗಡೆ ಮಾಡಿದೆ.
ಅಂತ್ಯೋದಯ ಪಡಿತರ ಚೀಟಿದಾರರ ಕುಟುಂಬಕ್ಕೆ ಎನ್‍ಎಫ್‍ಎಸ್‍ಎ ಯೋಜನೆಯಡಿ ಪ್ರತಿ ಕುಟುಂಬಕ್ಕೆ 35 ಕೆ.ಜಿ. ಅಕ್ಕಿ ಹಾಗೂ ಕುಟುಂಬದ ಪ್ರತಿ ಸದಸ್ಯರಿಗೆ ಪಿಎಂಜಿಕೆಎವೈ ಯೋಜನೆಯಡಿ 5 ಕೆ.ಜಿ. ಅಕ್ಕಿ ಹಾಗೂ 2 ಕೆ.ಜಿ. ತೊಗರಿಬೇಳೆ ಹಂಚಿಕೆ ನೀಡಲಾಗಿದೆ.
ಆದ್ಯತಾ ಕುಟುಂಬ (ಪಿಹೆಚ್‍ಹೆಚ್) ಪಡಿತರ ಚೀಟಿಯಲ್ಲಿನ ಪ್ರತಿ ಸದಸ್ಯರಿಗೆ ಎನ್‍ಎಫ್‍ಎಸ್‍ಎ ಹಂಚಿಕೆ 5 ಕೆ.ಜಿ.ಅಕ್ಕಿ ಮತ್ತು ಪಿಎಂಜಿಕೆಎವೈ ಯೋಜನೆಯಡಿ ಕುಟುಂಬದ ಪ್ರತಿ ಸದಸ್ಯರಿಗೆ 5 ಕೆ.ಜಿ.ಅಕ್ಕಿ ಒಟ್ಟು 10 ಕೆಜಿ ಅಕ್ಕಿ ಹಾಗೂ ಪ್ರತಿ ಕುಟುಂಬಕ್ಕೆ 2 ಕೆ.ಜಿ. ತೊಗರಿಬೇಳೆಯನ್ನು ಉಚಿತವಾಗಿ ನೀಡಲಾಗುವುದು.
ಆದ್ಯತೇತರ(ಎನ್‍ಪಿಹೆಚ್‍ಹೆಚ್) ಪಡಿತರ ಚೀಟಿದಾರರಿಗೆ ಏಕ ಸದಸ್ಯರಿಗೆ 15 ರೂ. ದರದಲ್ಲಿ 5 ಕೆ.ಜಿ., 2 ಮತ್ತು ಹೆಚ್ಚಿನ ಕುಟುಂಬದ ಸದಸ್ಯರಿಗೆ 10 ಕೆ.ಜಿ. ಅಕ್ಕಿಯನ್ನು ವಿತರಿಸಲಾಗುವುದು.
ಸಾರ್ವಜನಿಕ ವಿತರಣಾ ಪದ್ದತಿಯಡಿ ವಿತರಿಸುತ್ತಿರುವ ಅಕ್ಕಿಯನ್ನು ಕೆಲವೊಂದು ಪಡಿತರ ಚೀಟಿದಾರರು ದಿನಸಿ ಅಂಗಡಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ದೂರುಗಳು ಬಂದಿರುತ್ತದೆ. ಈ ಹಿನ್ನಲೆಯಲ್ಲಿ ಪಡಿತರ ಚೀಟಿದಾರರು ತಮಗೆ ಸರ್ಕಾರವು ಉಚಿತವಾಗಿ ವಿತರಿಸಿದ ಅಕ್ಕಿಯನ್ನು ಮಾರಾಟ ಮಾಡುವುದು ಹಾಗೂ ಪಡಿತರ ಚೀಟಿದಾರರಿಂದ ಅಕ್ಕಿಯನ್ನು ಖರೀದಿಸುವುದು ಅಪರಾಧವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಹೊಂದಿದ ಪಡಿತರ ಚೀಟಿಯನ್ನು ರದ್ಧುಪಡಿಸುವುದಲ್ಲದೇ ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆ 1855 ರನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಈ ರೀತಿ ಅಕ್ಕಿ ಮಾರಾಟ ಹಾಗೂ ಖರೀದಿ ಕಂಡುಬಂದಲ್ಲಿ ಕಚೇರಿಯ ಗಮನಕ್ಕೆ ತರುವಂತೆ ಶಿವಮೊಗ್ಗ ತಾಲೂಕು ತಹಶೀಲ್ದಾರ್ ಡಾ. ನಾಗರಾಜ್ ಎನ್. ತಿಳಿಸಿರುತ್ತಾರೆ.