ಬೆಂಗಳೂರು: ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದೆ. ನೀರಿನ ಎಟಿಎಂ ಮಾದರಿಯಲ್ಲೇ ಅಕ್ಕಿ ಎಟಿಎಂ ಅಳವಡಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಚಿಂತನೆ ನಡೆಸಿದೆ.
ವಿಯೆಟ್ನಾಂನಲ್ಲಿ ಕೊರೋನಾ ಕಾರಣದಿಂದ ಕೆಲಸ ಕಳೆದುಕೊಂಡ ಬಡವರಿಗೆ ನಿತ್ಯ ಎರಡರಿಂದ ಮೂರು ಕೆಜಿ ಅಕ್ಕಿ ವಿತರಿಸಲು ಎಟಿಎಂ ಬಳಸಲಾಗುತ್ತಿದೆ. ಯಂತ್ರದಲ್ಲಿ ಹಣ ಹಾಕಿದರೆ ಅಕ್ಕಿ ಸಿಗುತ್ತದೆ. ಜನರು ಬ್ಯಾಗ್ ಗಳಲ್ಲಿ ಕೊಳವೆಯಿಂದ ಬರುವ ಅಕ್ಕಿಯನ್ನು ಹಿಡಿದುಕೊಳ್ಳಬೇಕು. ಇದರಿಂದಾಗಿ ನ್ಯಾಯಬೆಲೆ ಅಂಗಡಿಗಳ ಎದುರು ಜನ ಸರತಿಸಾಲಿನಲ್ಲಿ ನಿಲ್ಲುವ ಬದಲು ಸುಲಭವಾಗಿ ಅಕ್ಕಿ ಪಡೆಯಬಹುದಾಗಿದೆ.
ರಾಜ್ಯದಲ್ಲಿ ಸುಮಾರು 4.3 ಕೋಟಿಗೂ ಅಧಿಕ ಜನರಿಗೆ ಪಡಿತರ ಆಹಾರಧಾನ್ಯ ವಿತರಿಸುತ್ತಿದ್ದು, ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಇದನ್ನು ತಡೆಯಲು ಮತ್ತು ಕೊರೋನಾ ಕಾರಣದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಅಕ್ಕಿ ಎಟಿಎಂ ಅಳವಡಿಸಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.
ಯಂತ್ರಕ್ಕೆ ಈ ಮೊದಲೇ ಎಷ್ಟು ಪ್ರಮಾಣದಲ್ಲಿ ಅಕ್ಕಿ ನೀಡಬೇಕೆಂಬುದು ಹಾಗೂ ಪಡಿತರ ಚೀಟಿದಾರರ ಮಾಹಿತಿ ದಾಖಲಾಗಿರುತ್ತದೆ. ಒಬ್ಬ ವ್ಯಕ್ತಿಗೆ ಇಷ್ಟೇ ಅಕ್ಕಿ ಎಂದು ನಿಗದಿ ಮಾಡಿ ಎಟಿಎಂಗಳಲ್ಲಿ ನೀಡಲಾಗುವುದು ಎಂದು ಹೇಳಲಾಗಿದೆ.