ಬೆಂಗಳೂರು: ನಗರಾಭಿವೃದ್ಧಿ ಇಲಾಖೆ ಹೊರಡಿಸಿದ ಸುತ್ತೋಲೆಯಿಂದ ಬಡವರು ಮತ್ತು ಮಧ್ಯಮ ವರ್ಗಕ್ಕೆ ವಸತಿ ಕಲ್ಪಿಸುವ ಕಂದಾಯ ಲೇಔಟ್ ಗಳಿಗೆ ಸಂಕಷ್ಟ ಎದುರಾಗಿದೆ ಎಂದು ಹೇಳಲಾಗಿದೆ.
ಹೊಸ ಬಡಾವಣೆ ನಿರ್ಮಾಣದ ಸಂದರ್ಭದಲ್ಲಿ ರಸ್ತೆ ಇಲ್ಲದಿದ್ದರೆ ರಸ್ತೆ ನಿರ್ಮಾಣಕ್ಕಾಗಿ ಭೂ ಮಾಲೀಕರಿಂದ ಜಾಗ ಪಡೆಯಲು ಸ್ಥಳೀಯ ಸಂಸ್ಥೆಗಳಿಗೆ ಪರಿತ್ಯಾಜನ ಪತ್ರ ನೋಂದಣಿ ಮಾಡಿಸಲಾಗುತ್ತಿತ್ತು. ಇದನ್ನು ಆಧಾರವಾಗಿಟ್ಟುಕೊಂಡು ರಿಯಲ್ ಎಸ್ಟೇಟ್ ಉದ್ಯಮಿಗಳು ರಸ್ತೆ ನಿರ್ಮಾಣ ಮಾಡಿಕೊಳ್ಳುತ್ತಿದ್ದರು. ಇದಕ್ಕಾಗಿ ಭೂಮಾಲೀಕರಿಗೆ ಹಣ ಕೊಡುತ್ತಿದ್ದರು.
ಆದರೆ, ಕಂದಾಯ ನಿವೇಶನ ಬಡಾವಣೆಗೆ ರಸ್ತೆಗೆಂದು ಕೃಷಿ ಜಮೀನು ಪಡೆಯುವಂತಿಲ್ಲ ಎಂದು ನಗರಾಭಿವೃದ್ಧಿ ಇಲಾಕೆ ತಿಳಿಸಿದೆ. ಕೃಷಿ ಭೂಮಿ ಪಡೆಯುವ ಸಂದರ್ಭದಲ್ಲಿ ಭೂಪರಿವರ್ತನೆ ವಿನ್ಯಾಸದ ಅನುಮೋದನೆ ಪಡೆಯಬೇಕು. ನೇರವಾಗಿ ಸ್ಥಳೀಯ ಸಂಸ್ಥೆಗಳು ರಸ್ತೆಗಾಗಿ ಜಾಗ ಪಡೆಯುವಂತಿಲ್ಲ. ಅನಿವಾರ್ಯ ಸಂದರ್ಭದಲ್ಲಿ ಯೋಜನಾ ಪ್ರಾಧಿಕಾರ, ನಗರಾಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಗಳ ತಾಂತ್ರಿಕ ಒಪ್ಪಿಗೆ ಪಡೆಯಬೇಕು. ಜಿಲ್ಲಾಧಿಕಾರಿಗಳು ಕಂದಾಯ ಕಾಯ್ದೆ ಅಧಿಸೂಚನೆ ಹೊರಡಿಸಿದ ಬಳಿಕ ಸ್ಥಳೀಯ ಸಂಸ್ಥೆಗಳು ಹಸ್ತಾಂತರ ಮಾಡಿಕೊಳ್ಳಬೇಕೆಂದು ಹೇಳಲಾಗಿದೆ.
ಬಡವರು, ಮಧ್ಯಮ ವರ್ಗದವರು ಕಡಿಮೆ ಬೆಲೆಯಲ್ಲಿ ಕಂದಾಯ ನಿವೇಶನ ಖರೀದಿಸುತ್ತಿದ್ದರು. ಈಗ ಭೂಪರಿವರ್ತನೆ ವಿನ್ಯಾಸದ ಅನುಮೋದನೆ ಇಲ್ಲದೆ ಕೃಷಿ ಜಮೀನನ್ನು ರೈತರಿಂದ ರಸ್ತೆಗಾಗಿ ಸ್ಥಳೀಯ ಸಂಸ್ಥೆಗಳು ಪಡೆಯುವಂತಿಲ್ಲ ಎಂದು ಹೇಳಲಾಗಿದ್ದು ಬಡ, ಮಧ್ಯಮ ವರ್ಗದವರಿಗೆ ತೊಂದರೆಯಾಗಲಿದೆ ಎನ್ನಲಾಗಿದೆ.