ಕೊರೋನಾ ಚಿಕಿತ್ಸೆಯಲ್ಲಿ ಬಳಕೆಯಾಗುವ ರೆಮ್ ಡಿಸಿವರ್ ಔಷಧ ಸಿಗದೇ ಕೊರೊನಾ ಸೋಂಕಿತರು ಪರದಾಡುವಂತಾಗಿದೆ ಎನ್ನಲಾಗಿದೆ.
ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರ ಚಿಕಿತ್ಸೆಗೆ ರೆಮ್ ಡಿಸಿವರ್ ಔಷಧ ಬಳಕೆ ಮಾಡಲಾಗುತ್ತದೆ. ಕೊರೋನಾ ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡುವ ಔಷಧ ಇದಾಗಿದ್ದು, ಸೋಂಕಿತರಿಗೆ 3 ದಿನಕ್ಕೆ 6 ರೆಮ್ ಡಿಸಿವರ್ ಇಂಜೆಕ್ಷನ್ ಗಳನ್ನು ನೀಡಬೇಕಿದೆ.
ಸರ್ಕಾರಿ ಆಸ್ಪತ್ರೆಗೆ ಕೆಡಿಎಲ್ ನಿಂದ ಔಷಧ ಪೂರೈಕೆಯಾಗುತ್ತದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ರೆಮ್ ಡಿಸಿವರ್ ಸಿಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿಯೂ ರೆಮ್ ಡಿಸಿವರ್ ಸಂಗ್ರಹವಿಲ್ಲ. ರೆಮ್ ಡಿಸಿವರ್ ಔಷಧವನ್ನು ತಂದುಕೊಡಬೇಕೆಂದು ಸೋಂಕಿತರ ಕುಟುಂಬಸ್ಥರಿಗೆ ಕೆಲ ಆಸ್ಪತ್ರೆಯಿಂದ ಕರೆ ಮಾಡಲಾಗಿದೆ. ಆದರೆ ಔಷಧ ಅಂಗಡಿಗಳಲ್ಲಿಯೂ ಔಷಧ ಸಿಗುತ್ತಿಲ್ಲ. ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಗೆ ಹೋಗಲು ಸೂಚನೆ ನೀಡಲಾಗಿದೆ. ಅಲ್ಲಿಗೆ ಹೋದರೆ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂಬ ಉತ್ತರ ಸಿಗುತ್ತದೆ ಎನ್ನಲಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ರೆಮ್ ಡಿಸಿವರ್ ಸಿಗದಂತಾಗಿದೆ. ಕೋವಿಡ್ ಚಿಕಿತ್ಸೆಗೆ ರೆಮ್ ಡಿಸಿವರ್ ಅಗತ್ಯವಾದ ಔಷಧವಾಗಿದ್ದು, ಬೇಡಿಕೆ ಹೆಚ್ಚಾಗಿದ್ದು, ಔಷಧ ಸಿಗದೇ ಸಮಸ್ಯೆ ಎದುರಾಗಿದೆ. ಬೆಡ್ ಸಿಗದೇ ಸೋಂಕಿತರಿಗೆ ಸಮಸ್ಯೆಯಾಗಿದ್ದು, ಈಗ ಔಷಧವೂ ಸಿಗುತ್ತಿಲ್ಲ ಎನ್ನಲಾಗಿದೆ.
ಕೊರೋನಾ ಸೋಂಕು ತಗುಲಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ರೆಮ್ ಡಿಸಿವರ್ ನೀಡುತ್ತಿದ್ದು, ಔಷಧ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಇದರ ಬೆಲೆ 4300 ರೂ.ನಿಂದ 4600 ರೂ. ಇದೆ ಎನ್ನಲಾಗಿದ್ದು, ಸ್ಟಾಕ್ ಇಲ್ಲ ಎಂದು ಹೇಳಲಾಗಿದೆ.