ಬೆಂಗಳೂರು: ಸರ್ಕಾರಿ ಹುದ್ದೆಯ ಅರ್ಜಿ ಶುಲ್ಕ ಹೆಚ್ಚಳ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಲಾಗಿದೆ. ಸರ್ಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದವರ ಅಂಕಪಟ್ಟಿ, ಪ್ರಮಾಣಪತ್ರ ಪರಿಶೀಲನೆಗೆ ತಗಲುವ ವೆಚ್ಚವನ್ನು ಸಂಬಂಧಿಸಿದ ಅಭ್ಯರ್ಥಿಗಳಿಂದ ವಸೂಲಿ ಮಾಡಲಾಗುವುದು ಎನ್ನಲಾಗಿದೆ.
ರಾಜ್ಯ ಸಿವಿಲ್ ಸೇವೆ ಹುದ್ದೆಗಳ ನೇಮಕಾತಿ ವೇಳೆ ಆಯ್ಕೆಯಾದ ಅಭ್ಯರ್ಥಿಗಳ ಸಿಂಧುತ್ವ ಪ್ರಮಾಣ ಪತ್ರ ಮತ್ತು ಇತರ ದಾಖಲೆಗಳೊಂದಿಗೆ ಅಭ್ಯರ್ಥಿಗಳು ಶೈಕ್ಷಣಿಕ ಪ್ರಮಾಣಪತ್ರ, ಅಂಕಪಟ್ಟಿಗಳ ನೈಜತೆಯನ್ನು ಪರಿಶೀಲಿಸಲಾಗುತ್ತದೆ. ದಾಖಲೆಗಳನ್ನು ನೀಡಿದ ವಿಶ್ವವಿದ್ಯಾಲಯ ಅಥವಾ ಶೈಕ್ಷಣಿಕ ಪರೀಕ್ಷಾ ಮಂಡಳಿಗಳಿಂದ ಪರಿಶೀಲನೆ ನಡೆಸಲಾಗುತ್ತದೆ. ಸಂಬಂಧಿತ ಮಂಡಳಿ, ವಿವಿಗಳು ಖಚಿತಪಡಿಸಿದ ನಂತರ ನೇಮಕಾತಿ ಆದೇಶ ಹೊರಡಿಸಲಾಗುತ್ತದೆ.
ಈ ಪ್ರಕ್ರಿಯೆಗೆ ತಗಲುವ ವೆಚ್ಚವನ್ನು ಅಭ್ಯರ್ಥಿಗಳಿಂದ ವಸೂಲಿ ಮಾಡಲು ತೀರ್ಮಾನಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕುರಿತು ಸುತ್ತೋಲೆ ಹೊರಡಿಸಿದ್ದು ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆ ಹೊರಡಿಸುವಾಗ ಈ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದೆ ಎನ್ನಲಾಗಿದೆ.