
ದಾವಣಗೆರೆ: ಕೋವಿಡ್-19 ಸೋಂಕು ಹರಡುತ್ತಿರುವ ಹಿನ್ನಲೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಜೂನ್ ಮಾಹೆಗೆ ಬಿಡುಗಡೆಯಾಗಿರುವ ಪಡಿತರದ ಮಾಹಿತಿ ಈ ಕೆಳಗಿನಂತಿದೆ.
ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಉಚಿತವಾಗಿ ಪ್ರತಿ ಕಾರ್ಡಿಗೆ 35 ಕೆ.ಜಿ ಅಕ್ಕಿ ವಿತರಿಸಲಾಗುವುದು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪಡಿತರ ಚೀಟಿ ಹೊಂದಿರುವ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಹಾಗೂ ಪ್ರತಿ ಕಾರ್ಡಿಗೆ 2 ಕೆ.ಜಿ ತೊಗರಿಬೇಳೆ ವಿತರಿಸಲಾಗುವುದು.
ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಪ್ರತಿ ಸದಸ್ಯರಿಗೆ(ಎನ್‍ಎಫ್‍ಎಸ್‍ಎ) 10 ಕೆ.ಜಿ ಅಕ್ಕಿ, 2 ಕೆ.ಜಿ ಗೋಧಿ, 2 ಕೆಜಿ ತೊಗರಿ ಬೆಳೆ ವಿತರಿಸಲಾಗುವುದು. ಒಪ್ಪಿಗೆ ನೀಡಿದ ಹಾಗೂ ಒಪ್ಪಿಗೆ ನೀಡಲಾರದ ಎಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ಕೆಜಿಗೆ ರೂ.15 ರಂತೆ 5 ಕೆಜಿ ಅಕ್ಕಿ ಹಾಗೂ 2 ಕ್ಕಿಂತ ಹೆಚ್ಚಿನ ಸದಸ್ಯರಿಗೆ 10 ಕೆಜಿ ಅಕ್ಕಿ ವಿತರಿಸಲಾಗುವುದು.
ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಪ್ರತಿ ಬಿಪಿಎಲ್ ಅರ್ಜಿದಾರರಿಗೆ ಉಚಿತವಾಗಿ 10 ಕೆಜಿ ಅಕ್ಕಿ ವಿತರಿಸಲಾಗುವುದು. ಎಪಿಎಲ್ ಅರ್ಜಿದಾರರಿಗೆ ಪ್ರತಿ ಕೆಜಿಗೆ ರೂ.15 ರಂತೆ 10 ಕೆಜಿ ಅಕ್ಕಿ ವಿತರಿಸಲಾಗುವುದು.
ವಲಸೆ ಕಾರ್ಮಿಕರಿಗೆ ಹಾಗೂ ಪಡಿತರ ಚೀಟಿ ಪಡೆಯದೇ ಇರುವ ಪ್ರತಿ ಫಲಾನುಭಾವಿಗಳಿಗೆ ಮೇ ಮಾಹೆಯ ಪಡಿತರ ಈಗಾಗಲೇ ಪಡೆದಿದ್ದರೆ ಜೂನ್ ಮಾಹೆಗೆ ಉಚಿತವಾಗಿ 5 ಕೆಜಿ ಅಕ್ಕಿ ಹಾಗೂ 2 ಕೆಜಿ ಕಡಲೆಕಾಳು ವಿತರಿಸಲಾಗುವುದು. ಮೇ ಮಾಹೆಯ ಪಡಿತರ ಪಡೆಯದಿದ್ದರೆ ಜೂನ್ ಮಾಹೆಗೆ ಉಚಿತವಾಗಿ 10 ಕೆಜಿ ಅಕ್ಕಿ, 2 ಕೆಜಿ ಕಡಲೆಕಾಳು ವಿತರಿಸಲಾಗುವುದು.
ಅಂತರ ರಾಜ್ಯ ಹಾಗೂ ಅಂತರ ಜಿಲ್ಲೆ ಪೋರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ಪಡಿತರ ವರ್ಗದ ಪಡಿತರ ಚೀಟಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕಡ್ಡಾಯವಾಗಿ ಬೆರಳಚ್ಚು ಮೂಲಕ ಹಾಗೂ ಬೆರಳಚ್ಚು ಬಾರದ ಕಾರ್ಡ್‍ದಾರರು ಮೊಬೈಲ್ ಒಟಿಪಿ ಮೂಲಕವೇ ಪಡಿತರ ವಿತರಣೆ ಮಾಡಲಾಗುತ್ತಿದ್ದು, ಸಾಮಾಜಿಕ ಅಂತರದಲ್ಲಿ ನಿಂತು ಪಡಿತರ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.