ಬೆಂಗಳೂರು: ಪಡಿತರ ವ್ಯವಸ್ಥೆಯಡಿ ಸಿರಿಧಾನ್ಯ ವಿತರಣೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ.
ಕೊರೋನಾ ಸಾಂಕ್ರಾಮಿಕ ರೋಗದ ಪರಿಣಾಮ ಮತ್ತು ಮುಂದಿನ ಯೋಜನೆಗಳ ಕುರಿತಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಜ್ಞರ ಸಮಿತಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದು, ಪಡಿತರ ವ್ಯವಸ್ಥೆಯಡಿ ರಾಗಿ, ಖಾದ್ಯತೈಲ, ಸಿರಿಧಾನ್ಯ ಮೊದಲಾದ ಅಗತ್ಯ ಆಹಾರ ಪದಾರ್ಥಗಳನ್ನು ವಿತರಿಸಬೇಕೆಂದು ಸಲಹೆ ನೀಡಲಾಗಿದೆ.
ತಜ್ಞರ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಿ ಪಾಲನಾ ವರದಿ ಸಲ್ಲಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನಿರ್ದೇಶನ ನೀಡಿದೆ.
ದಿನಗೂಲಿ ನೌಕರರು, ಬೀದಿಬದಿ ವಾಸಿಗಳು, ಕಾರ್ಮಿಕರು, ಕೆಳ ಸ್ತರದವರು, ದುರ್ಬಲರು, ವಲಸಿಗರು, ಬಾಲ ಕಾರ್ಮಿಕರು ಮತ್ತು ವಿಕಲಚೇತನ ಮಕ್ಕಳ ಮೇಲೆ ಕೊroನಾ ವ್ಯತಿರಿಕ್ತ ಪರಿಣಾಮ ಬೀರಿದೆ. ಪೌಷ್ಟಿಕ ಆಹಾರ ಮತ್ತು ಆಹಾರ ಧಾನ್ಯ, ಶಿಕ್ಷಣ, ಆರೋಗ್ಯದ ಮೇಲೆ ಪರಿಣಾಮ ಬೀರಿರುವುದನ್ನು ಗುರುತಿಸಲಾಗಿದೆ.
ಪಡಿತರ ವ್ಯವಸ್ಥೆಯಿಂದ ಹೊರಗಿರುವವರಿಗೆ ಸಮುದಾಯ ಅಡುಗೆ ಕೇಂದ್ರ ಸ್ಥಾಪಿಸಲು ಸಲಹೆ ನೀಡಲಾಗಿದೆ. ಅಂಗನವಾಡಿಯಲ್ಲಿ ನೋಂದಾಯಿಸಿಕೊಂಡ 3 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ಬಾಣಂತಿಯರ ಮನೆಗೆ ಆಹಾರಧಾನ್ಯ ಪೂರೈಕೆ ಮಾಡಲು ಸಲಹೆ ನೀಡಲಾಗಿದೆ.