ಜೂನ್ 21 ರಂದು ಭಾನುವಾರ ಖಂಡಗ್ರಾಸ ಸೂರ್ಯಗ್ರಹಣ ಸಂಭವಿಸಲಿದ್ದು ಬರಿಗಣ್ಣಿನಿಂದ ಗ್ರಹಣ ವೀಕ್ಷಿಸದಂತೆ ಖಗೋಳ ವೀಕ್ಷಕರು ಎಚ್ಚರಿಕೆ ನೀಡಿದ್ದಾರೆ.
ಬೆಳಗ್ಗೆ 10 ಗಂಟೆ 4 ನಿಮಿಷಕ್ಕೆ ಗ್ರಹಣ ಆರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆ 22 ನಿಮಿಷಕ್ಕೆ ಕೊನೆಯಾಗಲಿದೆ. ಬೆಳಗ್ಗೆ 11 ಗಂಟೆ 37 ನಿಮಿಷ ಗ್ರಹಣದ ಗರಿಷ್ಠ ಸಮಯವಾಗಿರುತ್ತದೆ. ಒಟ್ಟು 3 ಗಂಟೆ 18 ನಿಮಿಷದ ಗ್ರಹಣದ ಅವಧಿಯಲ್ಲಿ ಬರಿ ಕಣ್ಣಿನಿಂದ ನೋಡಿದರೆ ದೃಷ್ಟಿದೋಷ ಉಂಟಾಗಬಹುದು ಎಂದು ಹೇಳಲಾಗಿದೆ. ಫಿಲ್ಟರ್ ಕನ್ನಡಕ ಮೂಲಕ ಗ್ರಹಣ ವೀಕ್ಷಿಸಬಹುದು.
ಇನ್ನು ಧಾರ್ಮಿಕ ಆಚರಣೆಯಂತೆ ಗ್ರಹಣದ ವೇಳೆ ಮಠ-ಮಂದಿರಗಳಲ್ಲಿ ಪೂಜಾ ಕಾರ್ಯಗಳಲ್ಲಿ ವ್ಯತ್ಯಾಸವಾಗಲಿದೆ. ಗ್ರಹಣ ಕಾಲದಲ್ಲಿ ದೇವಾಲಯಗಳನ್ನು ಬಂದ್ ಮಾಡಲಾಗುವುದು. ಇನ್ನು ಗ್ರಹಣದ ವೇಳೆ ಆಹಾರ ಸೇವನೆ ನಿಷಿದ್ಧವೆಂದು ಜ್ಯೋತಿಷಿಗಳು ಹೇಳಿದ್ದಾರೆ.
ಶನಿವಾರ ರಾತ್ರಿ 10 ಗಂಟೆ ನಂತರ ಗ್ರಹಣ ಕಾಲ ಮುಗಿಯುವವರೆಗೂ ಆಹಾರ ಸ್ವೀಕರಿಸುವಂತಿಲ್ಲ. ರೋಗಿಗಳು, ಗರ್ಭಿಣಿಯರು, ಮಕ್ಕಳು, ಅಶಕ್ತರು, ಹಿರಿಯರಿಗೆ ವಿನಾಯಿತಿ ಇರುತ್ತದೆ. ಗ್ರಹಣದ ಕಾರಣ ರಾಶಿ ಅನುಸಾರ ಶುಭ, ಅಶುಭ, ಮಿಶ್ರ ಫಲ ಇರುತ್ತದೆ ಎನ್ನಲಾಗಿದೆ.